"ನನಗೆ ತುಂಬಾ ನೋವಾಗಿದೆ": ಮಗ ಬಿಜೆಪಿಗೆ ಸೇರ್ಪಡೆಯಾದ ಬಗ್ಗೆ ಕಾಂಗ್ರೆಸ್ ನಾಯಕ ಎಕೆ ಆ್ಯಂಟನಿ ಹೇಳಿಕೆ
ನವದೆಹಲಿ, ಏಪ್ರಿಲ್. 06: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಪುತ್ರ ಅನಿಲ್ ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎ.ಕೆ.ಆ್ಯಂಟನಿ, ಇದು "ತಪ್ಪು ನಿರ್ಧಾರ" ಮತ್ತು "ಅತ್ಯಂತ ನೋವಿನ" ಕ್ಷಣ ಎಂದು ತಮ್ಮ ದುಃಖ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ತಾವು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಇವರು ದೇಶವನ್ನು ವಿಭಜಿಸಲು ಮತ್ತು ಪ್ರಜಾಪ್ರಭುತ್ವದ ಅಡಿಪಾಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎ.ಕೆ ಆ್ಯಂಟನಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅವರ ಕೋಮುವಾದ ಮತ್ತು ವಿಭಜಕ ಅಜೆಂಡವನ್ನು ನಾನು ಯಾವಾಗಲೂ ವಿರೋಧಿಸುತ್ತಿದ್ದೆ. ನನ್ನ ಕೊನೆಯ ಉಸಿರು ಇರುವವರೆಗೂ ಅದನ್ನು ಮುಂದುವರಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ನೆಹರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುತ್ತೇನೆ ಎಂದಿರುವ ಅವರು, ಭಾರತದ ಏಕತೆಯನ್ನು ಕಾಪಾಡಿದ ಮತ್ತು ಅದರ ವೈವಿಧ್ಯತೆಯನ್ನು ಗೌರವಿಸಿದ ಕೀರ್ತಿ ಈ ಕುಟುಂಬಕ್ಕೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
"ಬಿಜೆಪಿ ಸೇರುವ ಅನಿಲ್ ನಿರ್ಧಾರ ನನಗೆ ನೋವುಂಟು ಮಾಡಿದೆ. ಇದು ತೀರಾ ತಪ್ಪು ನಿರ್ಧಾರ. ಭಾರತದ ಮೂಲವೆಂದರೆ ಏಕತೆ ಮತ್ತು ಧಾರ್ಮಿಕ ಸಾಮರಸ್ಯ. 2014ರ ನಂತರ ಅಧಿಕಾರಕ್ಕೆ ಬಂದ ಮೋದಿ ಸರಕಾರವು ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಿಕಲ್ಪನೆ, ಅದು ಭಾರತದ ಏಕತೆಗೆ ನಿಜವಾದ ಕಾರಣ. ಆದರೆ ಬಿಜೆಪಿ ಏಕರೂಪತೆಯನ್ನು ಮಾತ್ರ ನಂಬುತ್ತದೆ. ಅವರು ದೇಶದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ನಾನು ನನ್ನ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದೇನೆ. ನಾನು ಎಷ್ಟು ದಿನ ಬದುಕುತ್ತೇನೆ ಎಂದು ತಿಳಿದಿಲ್ಲ. ಆದರೆ ನಾನು ಇರುವವರೆಗೂ ನಾನು ಕಾಂಗ್ರೆಸ್‌ಗಾಗಿ ಬದುಕುತ್ತೇನೆ" ಎಂದು ಎಕೆ ಆಂಟನಿ ಹೇಳಿದ್ದು, ತನ್ನ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ವಿನಂತಿಸಿದ್ದಾರೆ.

ಕಾಂಗ್ರೆಸ್‌ನ ವಿವಿಧ ಸಾಮಾಜಿಕ ಯೋಜನೆಗಳು ಮತ್ತು ಡಿಜಿಟಲ್ ಪ್ರಚಾರಗಳನ್ನು ಮಾಡುತ್ತಿದ್ದ ಅನಿಲ್ ಆ್ಯಂಟನಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಿಂದ ಪ್ರಭಾವಿತರಾಗಿರುವುದಾಗಿ ತಿಳಿಸಿದ್ದರು. ಇದಾದ ಒಂದು ದಿನದ ನಂತರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದರು. ಗುರುವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
2002 ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ ವಿವಾದದ ನಂತರ ಅನಿಲ್ ಆ್ಯಂಟನಿ ಜನವರಿಯಲ್ಲಿ ಕಾಂಗ್ರೆಸ್ ತೊರೆದಿದ್ದರು. "ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕುಟುಂಬಕ್ಕಾಗಿ ದುಡಿಯುವುದು ತಮ್ಮ ಧರ್ಮ ಎಂದುಕೊಂಡಿದ್ದಾರೆ. ಅದನ್ನೆ ನಂಬಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ನನ್ನ ಧರ್ಮವಾಗಿದೆ ಎಂದು ತಿಳಿಸಿದ್ದರು.
ಜೊತೆಗೆ ನಮ್ಮ ತಂದೆ ಎಕೆ ಆ್ಯಂಟನಿ ಅವರು ಮತ್ತು ನಮ್ಮ ನಡುವಿನ ಸಂಬಂಧ ಉತ್ತಮವಾಗಿದೆ. ನಮ್ಮಿಬ್ಬರ ಮಧ್ಯ ಇರುವುದು ಸಿದ್ಧಾಂತ ಭಿನ್ನಾಬಿಪ್ರಾಯಗಳು ಮಾತ್ರ. ಅದರ ಹೊರತು ಯಾವುದೇ ವಿಚಾರದಲ್ಲಿ ವಿರೋಧಗಳು ನಮ್ಮಲ್ಲಿಲ್ಲ ಎಂದು ಹೇಳಿದ್ದರು. ಆದರೆ, ಎಕೆ ಆ್ಯಂಟನಿ ಮಾತ್ರ ಮಗನ ನಿರ್ಧಾರ ತಮಗೆ ನೋವು ತಂದಿದೆ ಎಂದು ಹೇಳಿದ್ದಾರೆ.












Click it and Unblock the Notifications