Haryana Assembly Election 2024: ಕಾಂಗ್ರೆಸ್‌ನಿಂದ ಪ್ರಣಾಳಿಕೆ ಬಿಡುಗಡೆ, ಮತದಾರರಿಗೆ ಏನೆಲ್ಲ ಸಿಗಲಿದೆ?
ಹರಿಯಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ.
ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಖಾತರಿ, 25 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ, ಸಟ್ಲೆಜ್-ಯಮುನಾ ಲಿಂಕ್ (SYL) ಕಾಲುವೆಯ ಕುರಿತು ಸುಪ್ರೀಂಕೋರ್ಟ್‌ನ ತೀರ್ಪನ್ನು ಅನುಷ್ಠಾನಗೊಳಿಸುವ ಬದ್ಧತೆ, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಮಾಸಿಕ 6,000 ರೂಪಾಯಿ ಪಿಂಚಣಿ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಹರಿಯಾಣ ಕಾಂಗ್ರೆಸ್ ಘೋಷಿಸಿದೆ.

ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಪಕ್ಷದ ಹರಿಯಾಣ ರಾಜ್ಯಾಧ್ಯಕ್ಷ ಉದಯಭಾನ್ ಸೇರಿದಂತೆ ಪ್ರಮುಖ ನಾಯಕರು ಪ್ರಣಾಳಿಕೆ ಬಿಡುಗಡೆ ವೇಳೆ ಉಪಸ್ಥಿತರಿದ್ದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹರಿಯಾಣ ವಿದೇಶಿ ಉದ್ಯೋಗ ಮಂಡಳಿಯ ಸ್ಥಾಪನೆ ಮಾಡುವುದಾಗಿ ಹೇಳಿದೆ. ಇದು ವಿದೇಶದಲ್ಲಿ ಉದ್ಯೋಗವನ್ನು ಹುಡುಕುವ ಯುವಕರಿಗೆ ಉದ್ಯೋಗಾವಕಾಶಗಳನ್ನು ಸುಲಭಗೊಳಿಸಲಿದೆ. ಹರಿಯಾಣದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು 2 ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಕ್ಯಾಲೆಂಡರ್ ಅನ್ನು ವಾರ್ಷಿಕವಾಗಿ ಪ್ರಕಟಿಸಲಾಗುವುದು. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರುವುದಾಗಿ ತಿಳಿಸಿದೆ.

ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡಲು 18ರಿಂದ 60ರ ವಯೋಮಾನದ ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವುದಾಗಿ ಹೇಳಿದೆ. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ops) ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ಧರು, ಅಂಗವಿಕಲ ವ್ಯಕ್ತಿಗಳು ಮತ್ತು ವಿಧವೆಯರಿಗೆ ಆರು ಸಾವಿರ ಮಾಸಿಕ ಪಿಂಚಣಿ ಭರವಸೆ ನೀಡಿದೆ.
ಹೆಣ್ಣುಮಕ್ಕಳಿಗಾಗಿ ಉಚಿತ ಪಿಂಕ್ ಮಿನಿ ಬಸ್‌ಗಳು ಮತ್ತು ಪಿಂಕ್ ಇ-ರಿಕ್ಷಾಗಳ ಸಾರಿಗೆ ಸೇವೆ ಘೋಷಿಸಿದೆ. ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಏಕ ಗವಾಕ್ಷಿ ವ್ಯವಸ್ಥೆ ಕೂಡ ಜಾರಿಗೆ ತರುವುದಾಗಿ ಹೇಳಿದೆ. 25 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ, ಹರಿಯಾಣ ಕೌಶಲ್ ರೋಜ್ಗರ್ ನಿಗಮ ಮುಚ್ಚುವುದು, ಪೇಪರ್ ಸೋರಿಕೆಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸಲು ತ್ವರಿತ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ಮತದಾರರ ಮುಂದಿಟ್ಟಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಜನಾದೇಶ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಭವಿಷ್ಯ ನುಡಿದಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೂಡಾ ಹೇಳಿದ್ದಾರೆ.
ಹರಿಯಾಣ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವ ವಿಚಾರವನ್ನು ಹೂಡಾ ತಳ್ಳಿ ಹಾಕಿದ್ದಾರೆ. ನಮ್ಮ ಕಾಂಗ್ರೆಸ್ ಒಗ್ಗಟ್ಟಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಆಕಾಂಕ್ಷಿಗಳಿರುವುದರಿಂದ ಪಕ್ಷ ಹೆಚ್ಚಿನ ಶಕ್ತಿ ಪಡೆಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಪುತ್ರ ದೀಪೇಂದರ್ ಹೂಡಾ ಅವರಿಗಿಂತ ನಾನು ಮುಖ್ಯಮಂತ್ರಿ ಸ್ಥಾನದ ಮೊದಲ ಆಕಾಂಕ್ಷಿ. ನಾನು ರಾಜಕೀಯಿಂದ ನಿವೃತ್ತಿಯಾಗಿಲ್ಲ ಎಂದು ಭೂಪಿಂದರ್ ಸಿಂಗ್ ಹೂಡಾ ಕುರ್ಚಿ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್ 8ರಂದು ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.











Click it and Unblock the Notifications