ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಬದುಕಿನ ಪ್ರಮುಖ ಅಂಶಗಳು
ನವದೆಹಲಿ, ಅಕ್ಟೋಬರ್ 19: ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಗಾಂಧಿ ಪರಿವಾರ ಹಾಗೂ ಪಕ್ಷದ ಪ್ರಭಾವಿ ನಾಯಕರು ಬೆಂಬಲವಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬ ಮಾತುಗಳು ಕೇಳಿಬಂದಿದೆ. ಗಾಂಧಿ ಮನೆತನಕ್ಕೆ ನಿಷ್ಠರಾಗಿರುವ ಖರ್ಗೆ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಬೀದರ್ ಜಿಲ್ಲೆಯವರಾದ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದುಬಂದಿದ್ದೆ ಒಂದು ರೋಚಕ ಗಾಥೆಯಾಗಿದೆ.
ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಖರ್ಗೆ ಕುರಿತ ಪ್ರಮುಖ ಅಂಶಗಳು ಇಲ್ಲಿವೆ.
1- ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜಯ ಗಳಿಸಿದರೆ, ಅವರು ಎರಡನೇ ದಲಿತ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಜಗಜೀವನ್ ರಾಮ್ ಅವರು ಮೊದಲ ದಲಿತ ಕಾಂಗ್ರೆಸ್ ಅಧ್ಯಕ್ಷರು.
2- ಕರ್ನಾಟಕದಿಂದ ಎರಡನೇ ಅಧ್ಯಕ್ಷರಾಗಿ ಖರ್ಗೆ ಅವರು ಆಯ್ಕೆಯಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು 1968ರಲ್ಲಿ ಅಧ್ಯಕ್ಷರಾಗಿದ್ದರು.

3- 1942, ಜುಲೈ 21ರಂದು ಬೀದರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಜನಿಸಿದರು. ಕಲಬುರಗಿಯ ಸೇಟ್ ಶಂಕರಲಾಲ್ ಲಹೋತಿ ಕಾಲೇಜ್‌ನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಖರ್ಗೆ ರಾಜಕೀಯ ಪ್ರವೇಶಿಸಿದರು.
4- ಆ ನಂತರ ಕಾರ್ಮಿಕ ಸಂಘದ ನಾಯಕರಾದರು. 1969ರಲ್ಲಿ ರಾಜಕೀಯ ಪ್ರವೇಶಿಸಿದ ಖರ್ಗೆ ಗುಲ್ಬರ್ಗಾ ನಗರ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
5- ಖರ್ಗೆ ಅವರನ್ನು ಸೋಲಿಲ್ಲದ ಸರದಾರ ಎಂದು ಕರೆಯಲಾಗುತ್ತದೆ. ಅವರು ಸ್ಪರ್ಧಿಸಿದ 12 ಚುನಾವಣೆಗಳ ಪೈಕಿ ಕೇವಲ ಒಂದರಲ್ಲಿ ಪರಾಭವಗೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ತಮ್ಮ ಶಿಷ್ಯ ಉಮೇಶ್ ಜಾದವ್ ವಿರುದ್ಧ ಸೋತರು. 95,452 ಮತಗಳಿಂದ ಗೆದ್ದ ಜಾದವ್, ಖರ್ಗೆ ಅವರ ಚುನಾವಣಾ ಎಜೆಂಟ್ ಆಗಿ ಕೆಲಸ ಮಾಡಿದ್ದಾರೆ.

6- ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆ ಅವರ ಹೆಸರು ಹಲವು ಬಾರಿ ಕೇಳಿಬಂದಿತ್ತು. 1999, 2004 ಮತ್ತು 2013ರಲ್ಲಿ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವ ಅವಕಾಶಗಳು ಕೈತಪ್ಪಿದವು.
7- ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
8- ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಹೊಂದಿದ್ದರು. ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟಾದರೂ, ಅವರು ಕರ್ನಾಟಕದ ಮುಖ್ಯಮಂತ್ರಿ ಆಗಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ಈಗಲೂ ಅಸಮಾಧಾನವಿದೆ.
9- ಖರ್ಗೆ ಅವರಿಗೆ ಮೂವರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪ್ರಿಯಾಂಕ್, ರಾಹುಲ್, ಮಿಲಿಂದ, ಪ್ರಿಯದರ್ಶಿನಿ ಹಾಗೂ ಜಯಶ್ರಿ ಖರ್ಗೆ ಅವರ ಮಕ್ಕಳು.
10- ಮೊದಲ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕರಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
11- ಮಲ್ಲಿಕಾರ್ಜುನ ಖರ್ಗೆ ಬೌದ್ಧ ಧರ್ಮದ ಅನುಯಾಯಿ ಆಗಿದ್ದಾರೆ.
12- ಖರ್ಗೆ ಅವರು ಹಲವು ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಕನ್ನಡ, ಹಿಂದಿ, ಉರ್ದು, ಮರಾಠಿ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರು ಮಾತನಾಡುತ್ತಾರೆ.












Click it and Unblock the Notifications