ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಇಬ್ಬರ ಗುಣಗಳಿರುವ ಬಾಳ ಸಂಗಾತಿಯೊಂದಿಗೆ ಜೀವನ ಎಂದ ರಾಹುಲ್ ಗಾಂಧಿ
ನವದೆಹಲಿ, ಡಿ. 29: ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಬಾಳ ಸಂಗಾತಿಯಾಗುವವರ ಕುರಿತು ಮಾತನಾಡಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಅವರ ಗುಣಗಳನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನ ನಡೆಸಲು ಬಯಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಪಾದಯಾತ್ರೆ ಮಾಡುತ್ತಲೇ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಇಂದಿರಾ ಗಾಂಧಿಯಂತಹ ಮಹಿಳೆಯೊಂದಿಗೆ ಜೀವನ ನಡೆಸಲು ಬಯಸುತ್ತಿರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿರುವ ಅವರು ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರ ಆಗಾಂಧಿ ಅವರನ್ನು "ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ" ಎಂದು ಕರೆದಿದ್ದಾರೆ.
"ನಾನು ಆಕೆಯದ್ದೇ ಗುಣಗಳನ್ನು ಹೊಂದಿರುವ ಮಹಿಳೆಗೆ ಆದ್ಯತೆ ನೀಡುತ್ತೇನೆ ಆದರೆ, ನನ್ನ ತಾಯಿ ಮತ್ತು ಅಜ್ಜಿಯ ಗುಣಗಳು ಆಕೆಯಲ್ಲಿದ್ದರೇ ಒಳ್ಳೆಯದು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆಯನ್ನು ಮುನ್ನಡೆಸುತ್ತಿರುವ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಮೋಟರ್‌ಸೈಕಲ್ ಮತ್ತು ಸೈಕಲ್‌ಗಳನ್ನು ಓಡಿಸುವ ಬಗ್ಗೆ ತಮಗಿರು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ . ಈ ವೇಳೆ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬೈಸಿಕಲ್ ಮತ್ತು ಮೌಂಟೇನ್ ಬೈಕ್‌ಗಳನ್ನು ತಯಾರಿಸುವ ಚೀನಾದ ಎಲೆಕ್ಟ್ರಿಕ್ ಕಂಪನಿಯನ್ನು ಉಲ್ಲೇಖಿಸಿದ್ದಾರೆ.

ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂದರ್ಶನದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ತಾನು ಸ್ವಂತ ಕಾರನ್ನು ಹೊಂದಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
"ನನಗೆ ನಿಜವಾಗಿಯೂ ಕಾರುಗಳಲ್ಲಿ, ಮೋಟಾರು ಬೈಕ್‌ಗಳಲ್ಲಿ ಆಸಕ್ತಿ ಇಲ್ಲ, ಆದರೆ ನನಗೆ ಮೋಟಾರು ಬೈಕುಗಳನ್ನು ಓಡಿಸಲು ಆಸಕ್ತಿ ಇದೆ. ನಾನು ಕಾರನ್ನು ಸರಿಪಡಿಸಬಲ್ಲೆ. ಆದರೆ, ನನಗೆ ಕಾರುಗಳ ಹುಚ್ಚಿಲ್ಲ" ಎಂದು ಹೇಳಿದ್ದಾರೆ.
ಸೆಪ್ಟಂಬರ್ ತಿಂಗಳಿನಲ್ಲಿ ತಮಿಳುನಾಡಿನ ಕನ್ಯಾಕುರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಕೊನೆಯಾಗಲಿದೆ. ಈ ಯಾತ್ರೆಯು ಈಗಾಗಲೇ ಕರ್ನಾಟಕ, ತಮಿಳುನಾಡು, ಕೇರಳ ಮಹಾರಾಷ್ಟ್ರ, ತೆಲಂಗಾಣ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಸಂಚರಿಸಿದೆ.












Click it and Unblock the Notifications