
ನೋಟುಗಳಲ್ಲಿ ಅಂಬೇಡ್ಕರ್ ಚಿತ್ರ ಏಕೆ ಬೇಡ: ಕೇಜ್ರಿವಾಲ್‌ಗೆ ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಅಕ್ಟೋಬರ್ 27: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕರೆನ್ಸಿ ನೋಟುಗಳಲ್ಲಿ ಗಣೇಶ ಹಾಗೂ ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿಂಧೆ ಬದಲಿಗೆ ಬಿಜೆಪಿಗೆ ಮುಖ್ಯಮಂತ್ರಿ ಕುರ್ಚಿ; ಸುಳಿವು ಕೊಟ್ಟ ಸಾಮ್ನಾ!
ಹೊಸ ನೋಟುಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿತ್ರವೇಕೆ ಬೇಡವೆಂದು ಕೇಜ್ರಿವಾಲ್ ಅವರನ್ನು ಕೇಳಿದ್ದಾರೆ.
'ಹೊಸ ಸರಣಿಯ ಕರೆನ್ಸಿ ನೋಟುಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಏಕೆ ಹಾಕಬಾರದು? ಒಂದು ಬದಿಯಲ್ಲಿ ಮಹಾತ್ಮ ಗಾಂಧಿ, ಇನ್ನೊಂದು ಬದಿಯಲ್ಲಿ ಡಾ.ಅಂಬೇಡ್ಕರ್' ಎಂದು ಪ್ರಶ್ನಿಸಿದ್ದಾರೆ.
'ಅಹಿಂಸೆ, ಸಾಂವಿಧಾನ ಮತ್ತು ಸಮಾನತಾವಾದವು ಒಂದು ಅನನ್ಯ ಒಕ್ಕೂಟವನ್ನು ಬೆಸೆದಿದೆ. ಅದು ಆಧುನಿಕ ಭಾರತವನ್ನು ಪರಿಪೂರ್ಣವಾಗಿ ಒಟ್ಟುಗೂಡಿಸಿದೆ. ಇದಕ್ಕೆ ಕಾರಣವಾದ ಪ್ರತಿಭೆಯ ಭಾವ ಚಿತ್ರವನ್ನೇಕೆ ಮುದ್ರಿಸಬಾರದು' ಎಂದು ಅವರು ಕೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಂಜಾಬ್ ಘಟಕದ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಅವರು, 'ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ. ಆ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಹಿಂದುತ್ವವನ್ನು ಅವರು ಆಶ್ರಯಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದ ಅರವಿಂದ ಕೇಜ್ರಿವಾಲ್ ಅವರು ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ದೇವತೆಗಳ ನಮ್ಮನ್ನು ಆಶೀರ್ವದಿಸದಿದ್ದರೆ, ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನಮ್ಮ ಕರೆನ್ಸಿ ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
'ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶ ದೇವರ ಚಿತ್ರವಿದ್ದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ. ನಾನು ಈ ಬಗ್ಗೆ ಎರಡು ದಿನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೇನೆ' ಎಂದು ಹೇಳಿದ್ದರು.
ಬಿಜೆಪಿಯಿಂದಲೂ ತೀಕ್ಷ್ಣ ಪ್ರತಿಕ್ರಿಯೆ
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಸಂಬಿತ್ ಪಾತ್ರ, 'ದೀಪಾವಳಿಯಂದು ಪಟಾಕಿ ಸಿಡಿಸುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಹಿಂದೂ ಧರ್ಮದ ಬಗ್ಗೆ ಕೇಜ್ರಿವಾಲ್ ಹೊಂದಿರುವ ದ್ವಂದ್ವ ನಿಲುವು ಬಯಲಾಗಿದೆ' ಎಂದು ಟೀಕಿಸಿದ್ದಾರೆ.'
'ಕೆಲ ತಿಂಗಳ ಹಿಂದೆ ಅರವಿಂದ ಕೇಜ್ರಿವಾಲ್ ಅವರು ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಲೇವಡಿ ಮಾಡಿದ್ದರು. ಅದರ ಬಗ್ಗೆ ವಿಧಾನ ಸಭೆಯಲ್ಲಿ ಕುಹಕವಾಡಿದ್ದರು. ಆದರೆ, ಈಗ ಅವರು ಧಾರ್ಮಿಕರಂತೆ ನಟಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದರು.
'ದೆಹಲಿ ಸಿಎಂ ಕೇಜ್ರಿವಾಲ್ ಅವರ ರಾಜಕಾರಣ ಈಗ ಯು-ಟರ್ನ್ ತೆಗೆದುಕೊಳ್ಳುತ್ತಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗಲು ಅವರು ನಿಕಾರಿಸಿದ್ದರು. ಅಲ್ಲಿ ಸಲ್ಲಿಸುವ ಪ್ರಾರ್ಥನೆಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಸುಳ್ಳು ನುಡಿದಿದ್ದರು' ಎಂದು ಟೀಕಿಸಿದ್ದಾರೆ.
ಗುಜರಾತ್ ಚುನಾವಣೆ: ಹಿಂದುತ್ವಕ್ಕೆ ಮಣೆ
ಗುಜರಾತ್ ಚುನಾವಣೆಗೆ ಕೆಲ ದಿನಗಳು ಬಾಕಿ ಇವೆ. ಹಿಂದುತ್ವದ ಪ್ರಯೋಗ ಶಾಲೆಯಂತಿರುವ ಗುಜರಾತ್‌ನಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಹಿಂದುತ್ವದ ಪ್ರತಿಪಾದನೆ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.
ಅಭಿವೃದ್ದಿ, ಶಾಲೆ, ನೀರು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕಿದ್ದ ಅರವಿಂದ ಕೇಜ್ರಿವಾಲ್ ಹಿಂದುತ್ವದ ಕುರಿತು ಮಾತನಾಡಿದ್ದು ಎಷ್ಟು ಸರಿ ಎಂಬ ವಾದಗಳೂ ಕೇಳಿಬಂದಿವೆ. ಅರವಿಂದ ಕೇಜ್ರಿವಾಲ್ ಅವರ ಈ ನೋಟಿನ ಹೇಳಿಕೆಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬೆಂಬಲ ಸೂಚಿಸಿದ್ದಾರೆ.