ಭಾರತದಲ್ಲಿ ವಿಪಕ್ಷ ಸ್ಥಾನ ನಿರ್ವಹಣೆಯಲ್ಲಿ ಕಾಂಗ್ರೆಸ್ ಫೇಲ್: ಮಾಜಿ ಸಿಎಂ ಮುಕುಲ್ ಸಂಗ್ಮಾ
ಶಿಲ್ಲಾಂಗ್, ನವೆಂಬರ್ 25: ಭಾರತದಲ್ಲಿ ಪ್ರಮುಖ ವಿರೋಧ ಪಕ್ಷದ ಪಾತ್ರವನ್ನು ವಹಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಆರೋಪಿಸಿದ್ದಾರೆ.
ಗುರುವಾರ ಶಿಲ್ಲಾಂಗ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ನಾವು ಟಿಎಂಸಿ ಜೊತೆಗೆ ಹೋಗುವುದಕ್ಕೆ ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಜನಸೇವೆ ಸಲ್ಲಿಸುವ ಬದ್ಧತೆಯನ್ನು ಇಟ್ಟುಕೊಂಡು ನಾವು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚಿಸುವ ವಿಶ್ವಾಸವಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲದೇ ಮತದಾನದ ನಂತರ ನಮ್ಮ ಸದಸ್ಯರನ್ನು ಬೇಟೆ ಆಡುವ ಚಟುವಟಿಕೆಗಳೂ ನಡೆದಿವೆ," ಎಂದು ಮಾಜಿ ಸಿಎಂ ಮುಕುಲ್ ಸಂಗ್ಮಾ ಆರೋಪಿಸಿದ್ದಾರೆ.

ಪ್ರತಿಪಕ್ಷ ಪಾತ್ರದ ನಿರ್ವಹಣೆಯಲ್ಲಿ ವಿಫಲ:
"ಈ 17 ಜನರ ಗುಂಪು ಒಟ್ಟಾರೆಯಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದೆ. ರಾಜ್ಯದ ಬಗೆಗಿನ ಬದ್ಧತೆಯು ಎಲ್ಲವನ್ನೂ ಮೀರಿಸಿದ್ದಾಗಿದೆ. ಪ್ರತಿಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ನಾವು ನಮ್ಮ ಕರ್ತವ್ಯದಲ್ಲಿ ನಿಭಾಯಿಸುವಲ್ಲಿ ವಿಫಲರಾಗಿದ್ದೇವೆ," ಎಂದು ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಹೇಳಿದ್ದಾರೆ.
ಈಶಾನ್ಯದಲ್ಲಿ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ:
"ಕಾಂಗ್ರೆಸ್ ಅನ್ನು ಒಡೆಯುವ ಈ ಷಡ್ಯಂತ್ರ ಮೇಘಾಲಯಕ್ಕೆ ಮಾತ್ರ ಸೀಮಿತವಾಗಿಲ್ಲದೇ, ಇಡೀ ಈಶಾನ್ಯ ರಾಜ್ಯಗಳಲ್ಲಿ ಹರಡುತ್ತಿದೆ. ಅವರನ್ನು ಮೊದಲು ಟಿಎಂಸಿ ಚಿಹ್ನೆಯಲ್ಲಿ ಆಯ್ಕೆ ಮಾಡಿಸಿ ನಂತರ ಪಕ್ಷಕ್ಕೆ ಸ್ವಾಗತಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸವಾಲು ಹಾಕುತ್ತೇನೆ," ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
"ಮಮತಾ ಬ್ಯಾನರ್ಜಿ ಈಗ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದರೆ, ಆಗ ಪ್ರಧಾನಿ ನರೇಂದ್ರ ಮೋದಿ ಕೋಪಗೊಳ್ಳುತ್ತಾರೆ. ಆಕೆಯ ಸೋದರಳಿಯನಿಗೆ ED ಸಮನ್ಸ್ ಜಾರಿಗೊಳಿಸಿದ ನಂತರ ಆಕೆಯ ಕ್ರಮಗಳು ಬದಲಾದವು. ಇದಕ್ಕೂ ಮುನ್ನ ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡುವಂತೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು," ಎಂದು ಚೌಧರಿ ಕಿಡಿ ಕಾರಿದ್ದಾರೆ.
ಮೇಘಾಲಯದಲ್ಲಿ ನಡೆದ ರಾಜಕೀಯ ಬೆಳವಣಿಗೆ:
ಮೇಘಾಲಯದ ಕಾಂಗ್ರೆಸ್ಸಿನಲ್ಲಿ ರಾಜಕೀಯ ದಂಗೆ ಸೃಷ್ಟಿಯಾಗಿದೆ. ಬುಧವಾರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಕುರಿತು ಮೇಘಾಲಯ ಶಾಸಕರು ಈಗಾಗಲೇ ವಿಧಾನಸಭಾ ಸ್ಪೀಕರ್ ಮೆತ್ಬಾ ಲಿಂಗ್ಡೋರಿಗೆ ಪತ್ರ ಬರೆದಿದ್ದಾರೆ.
ಮೇಘಾಲಯದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, 12 ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಟಿಎಂಸಿಯು ರಾಜ್ಯದ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ದೆಹಲಿ ಪ್ರವಾಸದಲ್ಲಿ ಇರುವಾಗಲೇ ಇಂಥದೊಂದು ರಾಜಕೀಯ ಬೆಳವಣಿಗೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ತೃಣಮೂಲ ಕಾಂಗ್ರೆಸ್ ಪಕ್ಷವು ವಿಸ್ತರಣಾವಾದದ ನೀತಿ ಅನುಸರಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗಿದೆ.
ಸೋನಿಯಾ ಗಾಂಧಿ ಭೇಟಿ ಬಗ್ಗೆ ಮಮತಾ ಬ್ಯಾನರ್ಜಿ ಮಾತು:
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಏಕೆ ಭೇಟಿಯಾಗಲಿಲ್ಲ ಎಂಬ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗರಂ ಆಗಿ ಉತ್ತರಿಸಿದರು. ಸೋನಿಯಾ ಗಾಂಧಿಯವರ ಭೇಟಿಗೆ ಯಾವುದೇ ಅಪಾಯಿಂಟ್‌ಮೆಂಟ್ ಕೇಳಿರಲಿಲ್ಲ, ಏಕೆಂದರೆ ಅವರು ಪಂಜಾಬ್ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು. ಅಲ್ಲದೇ, "ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಾಗಿಲ್ಲ" ಎಂದು ಹೇಳಿದರು.












Click it and Unblock the Notifications