ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ: ಕಾಂಗ್ರೆಸ್‌ಗೆ ಕಠಿಣ ಪರೀಕ್ಷೆಯ ಚುನಾವಣೆ, ಯಾಕೆ ಇಲ್ಲಿದೆ ವಿವರ
ದೇಶದ ರಾಜಕೀಯ ವಲಯದಲ್ಲಿ ಈಗ ನಾಲ್ಕು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ದಕ್ಷಿಣದಿಂದ ಪೂರ್ವದ ತನಕ ಕಾಂಗ್ರೆಸ್ ಪಕ್ಷಕ್ಕೆ ಹಲವು ಅಡೆತಡೆಗಳು ಎದುರಾಗುತ್ತಿವೆ. ಕೇರಳ, ತಮಿಳುನಾಡು, ಆಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳೇನು ? ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
1. ತಮಿಳುನಾಡಿನ ರಾಜಕೀಯ
ತಮಿಳುನಾಡಿನಲ್ಲಿ ಬಹು ವರ್ಷಗಳಿಂದ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಸೀಟು ಹಂಚಿಕೆ ವಿಚಾರದಲ್ಲಿ ತಲೆನೋವು ಶುರುವಾಗಿದೆ.
ಅಧಿಕಾರ ಹಂಚಿಕೆ ಸಂಘರ್ಷ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಧಿಕಾರ ಹಂಚಿಕೆಯ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವುದು ಕೈ ನಾಯಕರ ಕಣ್ಣು ಕೆಂಪಾಗಿಸಿದೆ.
ಹೊಸ ಮೈತ್ರಿ ಕೂಗು: ಸ್ಥಳೀಯ ನಾಯಕರು ನಟ ವಿಜಯ್ ಅವರ ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳವುಂತೆ ವರಿಷ್ಠರಿಗೆ ಕೋರಿದ್ದಾರೆ. ಡಿಎಂಕೆ ಪ್ರಬಲವಾಗುತ್ತಿರುವಾಗ ಕಾಂಗ್ರೆಸ್ ಕೇವಲ ಜೂನಿಯರ್ ಪಾಲುದಾರನಾಗಿ ಉಳಿಯುವ ಅಪಾಯ ಎದುರಾಗಿದೆ.

2. ಪಶ್ಚಿಮ ಬಂಗಾಳ: ಏಕಾಂಗಿ ಹೋರಾಟದ ಅನಿವಾರ್ಯತೆ
ಒಂದು ಕಾಲದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎಡಪಕ್ಷಗಳ ಜೊತೆ ಮೈತ್ರಿ ಮುರಿದುಕೊಂಡು ಈ ಬಾರಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ.
ಟಿಎಂಸಿ ನಿಲುವು: ಇಂಡಿಯಾ ಒಕ್ಕೂಟದಲ್ಲಿದ್ದರೂ ತೃಣಮೂಲ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಯನ್ನು ನಿರಾಕರಿಸಿ ಏಕಾಂಗಿ ಸ್ಪರ್ದೆ ಘೋಷಿಸಿದೆ. ಸಂಘಟನೆಯ ದುರ್ಬಲತೆ, ಮತಗಳ ಕೊರತೆ ಕಾಂಗ್ರೆಸ್‌ಗೆ ಈ ರಾಜ್ಯದಲ್ಲಿ ದೊಡ್ಡ ಸವಾಲಾಗಿದೆ.
3.ಕೇರಳ: ಆಂತರಿಕ ಕಚ್ಚಾಟ ಮತ್ತು ಅಯ್ಯರ್ ಹೇಳಿಕೆ
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಸಾಂಪ್ರದಾಯಿಕ ಫೈಟ್ ಇದೆ. ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಪಿಣರಾಯಿ ವಿಜಯನ್ ಅವರ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸುವ ಮೂಲಕ ಪಕ್ಷಕ್ಕೆ ದೊಡ್ಡ ಮುಜುಗರ ಉಂಟುಮಾಡುತ್ತಿದ್ದಾರೆ.
ಆಂತರಿಕ ಗೊಂದಲ: ಅಧಿಕಾರಕ್ಕೆ ಬರಬೇಕೆಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಗೆ ಅಯ್ಯರ್ ಅವರ ಹೇಳಿಕೆಗಳು ಪಿಣರಾಯಿ ವಿಜಯನ್ ಸರ್ಕಾರಕ್ಕೆ ಲಾಭ ತರುವ ಆತಂಕ ಮೂಡಿಸಿದೆ.
4.ಅಸ್ಸಾಂ: ನಾಯಕತ್ವದ ಬಿಕ್ಕಟ್ಟು ಮತ್ತು ರಾಜೀನಾಮೆ ಪರ್ವ
ಅಸ್ಸಾಂನಲ್ಲೂ ಚುನಾವಣೆಗೂ ಮುಂಚೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಬಿಕ್ಕಟ್ಟು: ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರ ಅವರು ಸಂಸದ ಗೌರವ್ ಗಗೋಯ್ ಅವರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದರು. ವರಿಷ್ಠರ ಮನವೊಲಿಕೆ ನಂತರ ನಿರ್ಧಾರ ಬದಲಿಸಿದರೂ ಅಸಮಾಧಾನ ಇನ್ನೂ ಇದೆ.
ಸೀಟು ಹಂಚಿಕೆ: ಎಡಪಕ್ಷಗಳ ಜೊತೆಗಿನ ಸೀಟು ಹಂಚಿಕೆ ವಿಚಾರ ಕೂಡ ಕಾಂಗ್ರೆಸ್ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ರಾಷ್ಟ್ರಮಟ್ಟದ ಚಿತ್ರಣ ಮತ್ತು ಮುಂದಿನ ದಾರಿ
ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೊಸ ಚೈತನ್ಯ ತರಲು ಪ್ರಯತ್ನಿಸುತ್ತಿದ್ದರೂ, ರಾಜ್ಯಗಳಲ್ಲಿ ಪ್ರಾದೇಶಿಕ ಶಕ್ತಿಗಳದ್ದೇ ಮೇಲುಗೈ ಆಗುತ್ತಿದೆ.
ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲುಗಳೆಂದರೆ:
ಮೈತ್ರಿ ರಾಜಕೀಯದಲ್ಲಿ ಸಮತೋಲನ ಸಾಧಿಸುವುದು.
ರಾಜ್ಯಮಟ್ಟದಲ್ಲಿ ಹೊಸ ನಾಯಕತ್ವವನ್ನು ಬೆಳೆಸುವುದು.
ಯುವ ಮತದಾರರನ್ನು ಸೆಳೆಯಲು ನವೀನ ಕಾರ್ಯತಂತ್ರ ರೂಪಿಸುವುದು.












Click it and Unblock the Notifications