ದೆಹಲಿ ಚುನಾವಣೆ 2025: ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್ ಬಂಪರ್ ಘೋಷಣೆ, ಏನದು?
ನವದೆಹಲಿ, ಜನವರಿ 12: ರಾಜಧಾನಿ ನವದೆಹಲಿಯಲ್ಲಿ ಚುನಾವಣೆ ಕಾವು ಏರತೊಡಗಿದ್ದು, ಕಾಂಗ್ರೆಸ್ ಪಕ್ಷವು ಬಂಪರ್ ಘೋಷಣೆ ಮಾಡಿದೆ. ಇತ್ತೀಚೆಗೆ ನಡೆದ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಅಂಶಗಳು ಗಮನ ಸೆಳೆದಿದ್ದವು. ಈ ಮೂಲಕ ಕೇಂದ್ರ ಆಡಳಿತಾರೂಢ ಬಿಜೆಪಿ ಮತ್ತು ದೆಹಲಿ ಆಡಳಿತಾರೂಢ ಎಎಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.
ದೆಹಲಿಯಲ್ಲಿ ವಿಧಾನಸಭಾ ಚುನಾವಣೆ 2025 ಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 'ಯುವ ಉಡಾನ್ ಯೋಜನೆ' ಅಡಿಯಲ್ಲಿ ಪ್ರತಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ ಮಾಡಲಾಗುವುದು. ಈ ಕಾರಣಕ್ಕೆ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ನಿರುದ್ಯೋಗಿಗಳಿಗೆ ವಾರ್ಷಿಕ 8,500 ರೂ...
ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ಒಂದು ವರ್ಷದವರೆಗೆ 8,500 ರೂ. ಕೊಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ. ಇನ್ನೂ ಚುನಾವಣೆ ಪ್ರಣಾಳಿಕೆ ಬಿಟ್ಟಿಲ್ಲ, ಅಭ್ಯರ್ಥಿಗಳ ಆಯ್ಕೆಗೂ ಮೊದಲೇ ಕಾಂಗ್ರೆಸ್ ಭರವಸೆ ಘೋಷಣೆ ಮಾಡುತ್ತಿದೆ.
ಯಾವುದೇ ಒಂದು ಕಂಪನಿ, ಕಾರ್ಖಾನೆ ಅಥವಾ ಸಂಸ್ಥೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಬಲ್ಲ ಸಾಮರ್ಥ್ಯ ವಿರುವ, ಕೌಶಲ್ಯ ತೋರಿಸಬಲ್ಲ ಯುವಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಆರ್ಥಿಕ ಸಹಾಯ ಮಾಡಲಿದೆ. ಇವರಿಗೆ ಕಂಪನಿಗಳ ಮೂಲಕವೇ ಹಣ ನೀಡಲಾಗುತ್ತದೆ. ಮನೆಯಲ್ಲಿ ಕೂರಿಸಿ ಹಣ ಗಳಿಕೆಯ ದಾರಿಗೆ ಹಚ್ಚುವುದಿಲ್ಲ. ಆ ರೀತಿಯ ಯೋಜನೆ ಇದಲ್ಲ ಎಂದು ಸಚಿನ್ ಪೈಲಟ್ ಅವರು ಸ್ಪಷ್ಟಪಡಿಸಿದರು.

ತರಬೇತಿ ಪಡೆದ ಈ ನಿರುದ್ಯೋಗಿ ಯುವ ಸಮೂಹಕ್ಕೆ ಆಯಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ. ಅವರ ಕೌಶಲ್ಯ ಸುಧಾರಣೆ ಮಾಡುವ ಪ್ರಯತ್ನ ಇದಾಗಿದೆ ಎಂದರು.
ದೆಹಲಿ ಚುನಾವಣೆಗೆ ಕಾಂಗ್ರೆಸ್ ಯೋಜನೆ
ಯುವ ಉಡಾನ್ ಯೋಜನೆ ಸೇರಿದಂತೆ ಕಾಂಗ್ರೆಸ್ ಪಕ್ಷವು ದೆಹಲಿ ಚುನಾವಣೆಗೂ ಮೊದಲೇ ಘೋಷಿಸಿದ ಮೂರನೇ ಯೋಜನೆ ಇದಾಗಿದೆ. ಜನವರಿ 6 ರಂದು ಕಾಂಗ್ರೆಸ್ 'ಪ್ಯಾರಿ ದೀದಿ ಯೋಜನೆ' ಘೋಷಿಸಿತ್ತು. ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರೂ.ಗಳ ಆರ್ಥಿಕ ನೆರವು ನೀಡುವ ಭರವಸೆ ಇದಾಗಿದೆ.
ಇದೇ ಕಾಂಗ್ರೆಸ್ ಮೊನ್ನೆ ಜನವರಿ 8 ರಂದು 'ಜೀವನ ರಕ್ಷಾ ಯೋಜನೆ' ಘೋಷಣೆ ಮಾಡಿತು. ಈ ಯೋಜನೆಯಡಿ 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಇದೀಗ ನಿರುದ್ಯೋಗಿ ಯುವ ಸಮೂಹ ಗುರಿಯಾಗಿಟ್ಟುಕೊಂಡು ಯುವ ಉಡಾನ್ ಯೋಜನೆ ಘೋಷಣೆ ಮಾಡಲಾಗಿದೆ.
ಎಎಪಿ ಬಲ ಪ್ರದರ್ಶನ: ಮತದಾರರ ಸೆಳೆಯಲು 'ಕೈ' ಯತ್ನ
ದೆಹಲಿಯಲ್ಲಿ ಒಟ್ಟ 70 ವಿಧಾನಸಭಾ ಸೀಟುಗಳಿಗೆ ಮುಂದಿನ ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಚುನಾವಣೆ ಫಲಿತಾಂಶ ಪ್ರಕಟಿಸುವುದಾಗಿ ಕೇಂದ್ರ ಚುಣಾವಣೆ ಆಯೋಗ ಮಾಹಿತಿ ನೀಡಿದೆ.
ಭಾರತದಲ್ಲಿ ಕಾಂಗ್ರೆಸ್ ಆಡಳಿತ 2014ರಲ್ಲಿ ಕೊನೆಗೊಂಡಂತೆ 2015ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಂಡು ಎರಡು ಅವಧಿಗೆ ಆಮ್ ಆದ್ಮಿ ಪಕ್ಷವೇ ಅಧಿಕಾರ ವಹಿಸಿಕೊಂಡಿದೆ. ಪ್ರಬಲ ಪಕ್ಷವಾಗಿ ಹೊರ ಹೊಮ್ಮಿದೆ. ಕಳೆದ ಕೆಲವು ಚುನಾವಣೆಗಳಲ್ಲೂ ಎಎಪಿ ಉತ್ತಮ ಬಲ ಪ್ರದರ್ಶಿಸಿದೆ. ಇದೀಗ ದೆಹಲಿಯಲ್ಲಿ ಮೂರನೇ ಭಾರಿಗೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿವಿಧ ಭರವಸೆಗಳನ್ನು ಘೋಷಿಸುತ್ತ ಮತದಾರರನ್ನು ಸೆಳೆಯಲು ಮುಂದಾಗಿದೆ.












Click it and Unblock the Notifications