ಔರಂಗಜೇಬ್ ಸಮಾಧಿ ವಿವಾದ: ನಾಗ್ಪುರದಲ್ಲಿ ಘರ್ಷಣೆ 15 ಮಂದಿ ಪೊಲೀಸರಿಗೆ ಗಾಯ
ಸೋಮವಾರ ನಾಗ್ಪುರದಲ್ಲಿ ಕೋಮು ಗಲಭೆ ಉಂಟಾಗಿದ್ದು ಹಿಂಸಾಚಾರಕ್ಕೆ ತಿರುಗಿದೆ. ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆರವು ಮಾಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳ ಸೇರಿದಂತೆ ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಬಳಿಕ ವಾಹನಗಳಿಗೆ ಬೆಂಕಿ ಹಚ್ಚಿದ್ದು ಕಲ್ಲು ತೂರಾಟ ನಡೆಸಲಾಗಿದೆ.
ಈ ಸಂಘರ್ಷದಲ್ಲಿ 15 ಪೊಲೀಸರು ಮತ್ತು 5 ನಾಗರಿಕರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ 17 ಜನರನ್ನು ವಶಕ್ಕೆ ಪಡೆಯಾಗಿದೆ. ಹಿಂಸಾಚಾರದಲ್ಲಿ ಪಾಲ್ಗೊಂಡವರನ್ನು ಪೊಲೀಸರು ಹುಡುಕಿ ಬಂಧಿಸುತ್ತಿದ್ದಾರೆ.

ವದಂತಿಗಳಿಂದ ಗಲಭೆ ಸೃಷ್ಟಿ
ಸುಳ್ಳು ವದಂತಿಗಳಿಂದಾಗಿ ಈ ಗಲಭೆ ಸಂಭವಿಸಿದೆ ಎಂದು ನಾಗ್ಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ವದಂತಿಗಳಿಗೆ ಯಾರೂ ಕಿವಿಗೊಡದಂತೆ ಶಾಂತಿ ಕಾಪಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮನವಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ವದಂತಿಗಳಿಂದಾಗಿ ಹಿಂಸಾಚಾರ ಸಂಭವಿಸಿದೆ ಎಂದು ಕೇಂದ್ರ ಸಚಿವ ಮತ್ತು ನಾಗ್ಪುರ ಸಂಸದ ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಾಗ್ಪುರ ಗ್ರಾಮೀಣ ಪೊಲೀಸರನ್ನು ಕೂಡ ಕರೆಸಿಕೊಳ್ಳಲಾಗಿದೆ. ವದಂತಿ ಹರಡದಂತೆ ಯಡೆಯಲು ಸೈಬರ್ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹಿಂಸಾಚಾರದ ಪರಿಣಾಮವಾಗಿ 25 ರಿಂದ 30 ದ್ವಿಚಕ್ರ ವಾಹನಗಳು ಮತ್ತು 2 ರಿಂದ 3 ಕಾರುಗಳು ಸುಟ್ಟುಹೋಗಿವೆ.
ವದಂತಿ ಹರಡುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದು, ಮತ್ತಷ್ಟ ವಿಕೋಪಕ್ಕೆ ತಿರುಗಿದ ನಂತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘರ್ಷಣೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತವೆ. ಪ್ರತಿಭಟನೆ ವೇಳೆ ಜೆಸಿಬಿ ಯಂತ್ರಕ್ಕೆ ಕೂಡ ಬೆಂಕಿ ಹಚ್ಚಲಾಗಿದೆ ಎನ್ನುವ ವಿಡಿಯೋ ವೈರಲ್ ಆಗಿದೆ.
ಘರ್ಷಣೆ ಶುರುವಾಗುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನ ಮಾಡಿದರು. ಇದೀಗ ಮತ್ತಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.
ಚಿಟ್ನಿಸ್ ಪಾರ್ಕ್ ಮತ್ತು ಮಹಲ್ ಪ್ರದೇಶಗಳಲ್ಲಿ ಜನಸಮೂಹವನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಗಲಭೆ ಹೆಚ್ಚಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಘಟನೆ ಬಗ್ಗೆ ಅಗ್ನಿಶಾಮಕ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದು, ಎರಡು ಜೆಸಿಬಿಗಳನ್ನು ಸುಟ್ಟುಹಾಕಲಾಗಿದೆ, ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಆದರೆ ಅವರು ಕಲ್ಲು ತೂರಾಟ ನಡೆಸುತ್ತಿದ್ದು ನಮ್ಮ ಅಧಿಕಾರಿಯೊಬ್ಬರು ಕೂಡ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications