ಗಂಡ-ಹೆಂಡ್ತಿ ಬಡಿದಾಟ: ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಇಳಿಯಿತು- ಮುಂದೇನಾಯ್ತು? ತಿಳಿಯಿರಿ
ನವದೆಹಲಿ, ನವೆಂಬರ್, 29: ಸಾಮಾನ್ಯವಾಗಿ ಭಾರೀ ಮಳೆ, ಗಾಳಿ ಇರುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಿದ ಘಟನೆಗಳು ನಡೆದಿವೆ. ಹಾಗೂ ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹೋಗಿರುವುದನ್ನು ಕೇಳಿದ್ದೇವೆ. ಆದರೆ ಇದೀಗ ಅದಕ್ಕೂ ಮೀರಿದ ಅಂದರೆ ದಂಪತಿಗಳ ನಡುವೆ ಜಗಳ ನಡೆದಿದ್ದರಿಂದಾಗಿ ವಿಮಾನ ಮಾರ್ಗ ಬದಲಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದಂಪತಿಗಳ ನಡುವೆ ಜಗಳ ನಡೆದಿದ್ದು, ಇದರಿಂದ ಜರ್ಮನಿಯ ಮ್ಯೂನಿಕ್‌ನಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ಹೊರಟಿದ್ದ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ಮಾರ್ಗ ಬದಲಾವಣೆ ಮಾಡಿ ನವದೆಹಲಿಯಲ್ಲಿ ಇಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಂಪತಿಗಳ ಜಗಳ ತಾರಕಕ್ಕೆ ಏರಿದಾಗ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ಏರ್‌ಲೈನ್ಸ್‌ನ LH772 ವಿಮಾನ ಇಳಿಸಲಾಯಿತು ಎಂದು ತಿಳಿಸಿದ್ದಾರೆ.

ನವದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ ಏರ್‌ಲೈನ್ಸ್, ದೆಹಲಿಯಲ್ಲಿ ವಿಮಾನ ಇಳಿಸಲು ಅನುಮತಿ ಕೋರಿದರು. ಥಾಯ್ಲೆಂಡ್ ಮೂಲದ ಪತ್ನಿ ಜರ್ಮನಿಯ ಮೂಲದ ಪತಿಯ ವರ್ತನೆಯ ಬಗ್ಗೆ ಪೈಲಟ್‌ಗೆ ದೂರು ನೀಡಿದರು. ಆತನಿಂದ ತನಗೆ ಬೆದರಿಕೆ ಇದ್ದು, ಮಧ್ಯಪ್ರವೇಶಿಸಬೇಕು ಎಂದು ಕೋರಿರುವುದಾಗಿ ಲುಫ್ತಾನ್ಸಾ ಏರ್‌ಲೈನ್ಸ್ ತಿಳಿಸಿದೆ.
ವಿಮಾನದಲ್ಲಿರುವ ಪ್ರಯಾಣಿಕರ ಭದ್ರತೆಗೆ ಮೊದಲ ಆದ್ಯತೆ ಆಗಿದೆ ಎಂದು ಏರ್‌ಲೈನ್ಸ್ ಮಾಹಿತಿ ನೀಡಿದೆ. ಜರ್ಮನಿಯ 53 ವರ್ಷದ ಪ್ರಯಾಣಿಕ ಆಹಾರ ಎಸೆದು, ಲೈಟರ್ ಮೂಲಕ ಹೊದಿಕೆ ಸುಡಲು ಯತ್ನಿಸಿದರು. ಸಿಬ್ಬಂದಿಯ ಯಾವುದೇ ಸೂಚನೆಗಳನ್ನು ಪಾಲಿಸಲಿಲ್ಲ. ಬಳಿಕ ಸಿಐಎಸ್‌ಎಫ್ ನೆರವಿನಿಂದ ವಿಮಾನದಿಂದ ಪ್ರಯಾಣಿಕನನ್ನು ಇಳಿಸಲಾಯಿತು ಎಂದು ಏರ್‌ಲೈನ್ಸ್ ಮಾಹಿತಿ ನೀಡಿದೆ.
ಪ್ರತೇಕ ಪಿಎನ್‌ಆರ್ ಟಿಕೆಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಆತನ ಪತ್ನಿ ಬ್ಯಾಂಕಾಕ್‌ನತ್ತ ಪಯಣ ಬೆಳೆಸಲು ಇಂಗಿತ ವ್ಯಕ್ತಪಡಿಸಿದರು. ಮುಂದಿನ ಕ್ರಮಕ್ಕಾಗಿ ಭಾರತದಲ್ಲಿರುವ ಜರ್ಮನಿಯ ರಾಯಭಾರಿಯನ್ನು ಸಂಪರ್ಕಿಸಲಾಗಿದೆ ಎಂದು ಏರ್‌ಲೈನ್ಸ್ ಹೇಳಿದೆ. ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನನ್ನು ನವದೆಹಲಿ ಪೊಲೀಸರಿಗೆ ಒಪ್ಪಿಸುವ ಅಥವಾ ಆತನ ಕ್ಷಮೆಯಾಚನೆ ಪುರಸ್ಕರಿಸಿ ಮತ್ತೊಂದು ವಿಮಾನದಲ್ಲಿ ಜರ್ಮನಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಗಂಡ ಹೆಂಡಿರ ಜಗಳ ಉಂಡು ಮನಗುವವರೆಗೂ ಎನ್ನುವ ಮಾತೇ ಇದೆ. ಆದರೆ ಈ ಘಟನೆಯನ್ನು ಗಮನಿಸಿದರೆ ಆ ಮಾತಿಗೆ ತದ್ವಿರುದ್ಧವಾಗಿದೆ.












Click it and Unblock the Notifications