ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ: ಬಿಜೆಪಿ ಮೇಲೆ 'ಗುಜರಾತ್ ಮಾಡೆಲ್' ಹೊರೆ
ನವದೆಹಲಿ, ನವೆಂಬರ್ 4: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕಗಳು ಪ್ರಕಟಗೊಂಡಿವೆ. ಎರಡು ಹಂತದಲ್ಲಿ ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಡಿಸೆಂಬರ್ 1 ಹಾಗೂ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬರಲಿದೆ.
ಈ ಬಾರಿ ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಕುತೂಹಲ ಕೆರಳಿಸಿದೆ. ಈ ಮೊದಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಅಖಾಡಕ್ಕೆ ದುಮುಕಿದೆ. ಗುಜರಾತ್‌ನ ನಗರ ಕೇಂದ್ರಿತ ಮತದಾರರ ಒಲವು ಎಎಪಿ ಕಡೆ ವಾಲುತ್ತಿರುವುದು ಬಿಜೆಪಿಗೆ ಸಂಕಷ್ಟವನ್ನು ತಂದೊಡ್ಡಿದೆ.
ಬಿಜೆಪಿಗೆ ಹೊರೆಯಾಗಲಿದೆಯೇ 'ಗುಜರಾತ್ ಮಾಡೆಲ್' ?
ಕಳೆದ 24 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2001ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆ ನಂತರ 'ಗುಜರಾತ್ ಮಾಡೆಲ್' ಎಂಬುದು ಮುನ್ನೆಲೆಗೆ ಬಂದಿತು. ಬಿಜೆಪಿಯು ದಶಕಗಳ ಕಾಲ ಗುಜರಾತ್ ಮಾಡೆಲ್ ಬಗ್ಗೆ ಪ್ರಚಾರಗಳನ್ನು ಕೈಗೊಂಡಿತು. ಮೋದಿ ಅವರು ಪ್ರಧಾನಿಯಾಗಲೂ ಗುಜರಾತ್ ಮಾಡೆಲ್‌ನ ಪ್ರಚಾರ ದೊಡ್ಡ ಸಹಾಯ ಮಾಡಿತು. ಈಗ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ದಶಕಗಳೇ ಉರುಳಿವೆ. ಆದರೆ, ಬಿಜೆಪಿ ಗುಜರಾತ್ ಮಾಡೆಲ್ ಯಶಸ್ಸು ಕಂಡಿದೆಯೇ ಎಂಬುದು ಪ್ರಶ್ನೆಯಾಗೇ ಉಳಿದಿದೆ.

ಗುಜರಾತ್‌ನಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಶೈಕ್ಷಣಿಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚು ಕಾಡುತ್ತಿದೆ. ಒಂದು ಕಾಲದಲ್ಲಿ ಉತ್ತಮ ರಸ್ತೆಗಳಿಗೆ ಹೆಸರುವಾಸಿಯಾಗಿದ್ದ ಗುಜರಾತ್‌ನಲ್ಲಿ ರಸ್ತೆಗಳು ಹದಗೆಟ್ಟಿವೆ. ಗುಂಡಿ ಬಿದ್ದಿರುವ ರಸ್ತೆಗಳ ನಿರ್ವಹಣೆಯನ್ನು ಅಲ್ಲಿನ ಸರ್ಕಾರ ಹಾಗೂ ನಗರ ಪಾಲಿಕೆಗಳು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.
ಕಳೆದ ಚುನಾವಣೆಯಲ್ಲಿಯೇ ಗುಜರಾತ್ ಮಾಡೆಲ್‌ಗೆ ಪೆಟ್ಟು
ಗುಜರಾತ್ ಮಾಡೆಲ್‌ಗೆ ಕಳೆದ ಬಾರಿಯ ಚುನಾವಣೆಯಲ್ಲಿಯೇ ಪೆಟ್ಟು ಬಿದ್ದಿತ್ತು. 2017ರಲ್ಲಿ ನಡೆದ ಚುನಾವಣೆಯಲ್ಲಿ 180 ವಿಧಾನಸಭಾ ಕ್ಷೇತ್ರಗಳಲ್ಲಿ 77 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. 99 ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಪಡೆದಿತ್ತು. ಕಳೆದ ಸಾರಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗೆ ನಗರ ಕೇಂದ್ರಿತ ಮತದಾರರು ಒಲವು ತೋರಿದ್ದರು. ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಅಹಮದಾಬಾದ್‌ನಲ್ಲಿ 55 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಗುಜರಾತ್ ಚುನಾವಣಾ ಅಖಾಡಕ್ಕೆ ಎಎಪಿ ಬಂದಿದೆ. ಎಎಪಿಗೆ ನಗರ ಕೇಂದ್ರಿತ ಮತದಾರರು ಒಲವು ತೋರಿದ್ದಾರೆ ಎಂಬುದು ಸಮೀಕ್ಷೆಗಳಿಂದ ಗೊತ್ತಾಗಿದೆ. ಇದು ಬಿಜೆಪಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದೆ.

ಹಳ್ಳಿಗಳಲ್ಲಿ ವರ್ಚಸ್ಸು ಕಳೆದುಕೊಂಡ ಗುಜರಾತ್ ಮಾಡೆಲ್
ಕಳೆದ ಬಾರಿಯ ಚುನಾವಣೆಯನ್ನು ಗಮನಿಸುವುದಾದರೆ, ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಗುಜರಾತ್ ಮಾಡೆಲ್ ವರ್ಚಸ್ಸು ಕಡಿಮೆ ಆಗಿದೆ. ಇದನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಗುಜರಾತ್‌ನ ಹಳ್ಳಿಗಳಲ್ಲಿ ಕೆಳ ಹಂತದ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಯಾವುದೇ ರಾಷ್ಟ್ರೀಯ ನಾಯಕರು ಗುಜರಾತ್ ಚುನಾವಣಾ ಪ್ರಚಾರಕ್ಕೆ ಧುಮುಕಿಲ್ಲ. ಆದರೆ, ಗುಜರಾತ್‌ನ ಕಾಂಗ್ರೆಸ್ ಮುಖಂಡರು ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಕಾಂಗ್ರೆಸ್‌ನ ಈ ಹೊಸ ವರಸೆ ಬಗ್ಗೆ ಎಚ್ಚರಿಕೆ ಇರುವಂತೆ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ, ಗುಜರಾತ್ ಚುನಾವಣೆಯು ಬಿಜೆಪಿಗೆ ಸುಗಮದ ಹಾದಿಯಾಗಿ ಉಳಿದಿಲ್ಲ. ಒಂದು ವೇಳೆ, ಗುಜರಾತ್‌ನಲ್ಲಿ ಹಿನ್ನೆಡೆ ಅನುಭವಿಸುವುದು ಬಿಜೆಪಿಗೆ ದೊಡ್ಡ ಸಮಸ್ಯೆಯಾಗಲಿದೆ. ಮುಂದಿನ ಕರ್ನಾಟಕ ಹಾಗೂ ಉತ್ತರ ಭಾರತದ ಮೂರು ರಾಜ್ಯಗಳ ಚುನಾವಣೆಗಳ ಮೇಲೆ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ ಎಂಬುದು ಬಿಜೆಪಿ ನಾಯಕರ ಆತಂಕವಾಗಿದೆ.












Click it and Unblock the Notifications