ಅದಾನಿ-ಜಗನ್ ನಡೆಸಿರುವ ಅಕ್ರಮಗಳ ತನಿಖೆಗೆ ಸಿದ್ಧವೆಂದ ಚಂದ್ರಬಾಬು ನಾಯ್ಡು: ಬಿಜೆಪಿ-ಟಿಡಿಪಿ ಮೈತ್ರಿ ಮೇಲೆ ಗಂಭೀರ ಪರಿಣಾಮ?
ಉದ್ಯಮಿ ಗೌತಮ್ ಅದಾನಿ ಅವರ ಮೇಲೆ ಲಂಚ ಪ್ರಕರಣದ ಗಂಭೀರ ಆರೋಪಗಳು ಕೇಳಿಬಂದಿವೆ. ಅದಾನಿ ಅವರನ್ನು ಬಂಧಿಸಬೇಕೆಂದು ಅಮೆರಿಕದ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ. ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸಬಹುದೆಂಬ ಮಾತುಗಳು ಕೇಳಿಬಂದಿದೆ. ಈ ವಿಚಾರವಾಗಿ ಆಂಧ್ರದ ರಾಜಕಾರಣದಲ್ಲಿ ಕಲ್ಲೋಲವೇ ಸೃಷ್ಟಿಯಾಗಿದೆ. ಇದಕ್ಕೆ ಕಾರಣವಾಗಿರುವುದು ಉದ್ಯಮಿ ಅದಾನಿ ಹಾಗೂ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ನಡುವಿನ ನಿಕಟ ಸಂಬಂಧ..
ಜಗನ್ ಸಹೋದರಿಯಿಂದಲೇ ಗಂಭೀರ ಆರೋಪ
ಹಗರಣದ ಆರೋಪ ಎದುರಿಸುತ್ತಿರುವ ಅದಾನಿ ಅವರ ಜೊತೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಶಾಮೀಲಾಗಿದ್ದರು ಎಂಬ ಆರೋಪವನ್ನು ಕಾಂಗ್ರೆಸ್ ನಾಯಕಿ ವೈಎಸ್ ಶರ್ಮಿಳಾ ಮಾಡಿದ್ದಾರೆ. 'ಜಗನ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅದಾನಿ ಅವರ ಕೈಗಾರಿಕೋದ್ಯಮಗಳಿಗೆ ಸಾಕಷ್ಟು ಸಹಾಯ ಮಾಡಿದ್ದರು. ಅದಾನಿ ಜೊತೆ ಸೇರಿ ವ್ಯಾಪಕ ಭ್ರಷ್ಟಾಚಾರ ಎಸಗಿದ್ದರು' ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಶರ್ಮಿಳಾ, 'ಉದ್ಯಮಿ ಗೌತಮ್ ಅದಾನಿ ಭಾರತದ ಮಾನಹಾನಿ ಮಾಡುತ್ತಿದ್ದರೆ, ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮಾನಹಾನಿ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಸೌರ ವಿದ್ಯುತ್ ಶಕ್ತಿ ಒಪ್ಪಂದದಲ್ಲಿ, ಅದಾನಿ ಅವರಿಂದ 1,750 ಕೋಟಿ ರೂಪಾಯಿ ಲಂಚವನ್ನು ಜಗನ್ ಸ್ವೀಕರಿಸಿದ್ದಾರೆ. ಈ ಮೂಲಕ ಜಗನ್ ಅವರು ರಾಜ್ಯದ ಮೇಲೆ 17 ಸಾವಿರ ಕೋಟಿ ರೂಪಾಯಿ ಹೊರೆ ಹಾಕಿದ್ದಾರೆ' ಎಂದು ಶರ್ಮಿಳಾ ತಿಳಿಸಿದ್ದಾರೆ.
'ಆಂದ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಿಂದಲೂ ಈ ಆರೋಪಗಳು ಕೇಳಿಬರುತ್ತಿವೆ. 2021ರ ಆಗಸ್ಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದ ಅದಾನಿ ಅವರು ಒಪ್ಪಂದದ ಬಗ್ಗೆ ಚರ್ಚಿಸಿದ್ದರು' ಎಂದು ಶರ್ಮಿಳಾ ಆರೋಪಿಸಿದ್ದಾರೆ.
ಗಂಗಾವರಂ ಬಂದರು ಯೋಜನೆಯಲ್ಲಿ ಶೇ 10ರಷ್ಟು ಪಾಲನ್ನು ಕಿಕ್‌ಬ್ಯಾಕ್ ಹಣವಾಗಿ ಜಗನ್ ರೆಡ್ಡಿ ಅವರು ಅದಾನಿಯಿಂದ ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದ್ದಾರೆ ಎಂದು ಶರ್ಮಿಳಾ ಆರೋಪಿಸಿದ್ದಾರೆ.
'ಸರ್ಕಾರದ ನಿಯಂತ್ರಣದಲ್ಲಿ ಗಂಗಾವರಂ ಬಂದರು ಉಳಿಯಬೇಕು ಎಂಬುದು ವೈಎಸ್ ರಾಜಶೇಖರ ರೆಡ್ಡಿ ಅವರ ಕನಸಾಗಿತ್ತು. ಆದರೆ, 9,000 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿರುವ ಗಂಗಾವರಂ ಬಂದರನ್ನು ಕೇವಲ 640 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಒಪ್ಪಂದದಲ್ಲಿ ಜಗನ್ ರೆಡ್ಡಿ ಎಷ್ಟು ಲಂಚ ಪಡೆದಿರಬಹುದು ಎಂಬುದು ಗೊತ್ತಾಗಬೇಕಿದೆ. ಜಗನ್ ಅವರು ಆಂಧ್ರಪ್ರದೇಶವನ್ನು ಅದಾನಿ ರಾಷ್ಟ್ರವನ್ನಾಗಿ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಜಗನ್ ವಿರುದ್ಧ ತನಿಖೆ ನಡೆಸಿಯೇ ಸಿದ್ಧವೆಂದ ಚಂದ್ರಬಾಬು ನಾಯ್ಡು
ಅದಾನಿ-ಜಗನ್ ಸಂಪರ್ಕದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, 'ಅದಾನಿ ಹಾಗೂ ಜಗನ್ ನಡುವಿನ ಅಕ್ರಮ ಒಪ್ಪಂದಗಳ ಬಗ್ಗೆ ತನಿಖೆ ನಡೆಸಲಿದ್ದೇವೆ. ಸಾಕ್ಷ್ಯಾಧಾರಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.
2021ರ ಆಗಸ್ಟ್‌ನಲ್ಲಿ ಅದಾನಿ ಅವರು ಜಗನ್ ಅವರನ್ನು ಭೇಟಿಯಾಗಿದ್ದು ನಿಜ. ಆಂಧ್ರಪ್ರದೇಶ ಸರ್ಕಾರವು ನಡೆಸುತ್ತಿರುವ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದೊಂದಿಗೆ ವಿದ್ಯುತ್ ಸರಬರಾಜು ಒಪ್ಪಂದಕ್ಕೆ ಸಹಿ ಹಾಕಿದ್ದು ನಿಜ. ಅಲ್ಲಿ ನಡೆದಿರುವ ಅಕ್ರಮಗಳ ತನಿಖೆಯಾದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
'ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ಸಂಗತಿಗಳು ಬೆಳಕಿಗೆ ಬರಬೇಕಿದೆ. ಸತ್ಯಾಂಶಗಳು ಬಯಲಿಗೆ ಬರುತ್ತಿರುವುದರಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಸರ್ಕಾರ ಚಿಂತನೆ ನಡೆಸಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ. ಏನು ಮಾಡಬೇಕೆಂಬುದನ್ನು ತೀರ್ಮಾನಿಸುತ್ತೇವೆ. ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ನಾಯ್ಡು ಹೇಳಿದ್ದಾರೆ.
ಈಗ ಕೇಳಿಬಂದಿರುವ ಆರೋಪಗಳ ಗಂಭೀರತೆ ಬಹಳ ದೊಡ್ಡದಿದೆ. ಇದು ರಾಜ್ಯದ ಗೌರವಕ್ಕೆ ಧಕ್ಕೆ ಉಂಟು ಮಾಡಲಿದೆ. ಆಂಧ್ರಪ್ರದೇಶದ ಬ್ರ್ಯಾಂಡ್ ಅನ್ನು ಹಾನಿಗೊಳಿಸಲಿದೆ. ಇದು ತುಂಬಾ ನೋವಿನ ಸಂಗತಿ' ಎಂದು ನಾಯ್ಡು ಹೇಳಿದ್ದಾರೆ.
ಬಿಜೆಪಿ-ಟಿಡಿಪಿ ಮೈತ್ರಿ ಮೇಲೆ ಪ್ರಭಾವ
ಅದಾನಿ ಜೊತೆ ಪ್ರಧಾನಿ ಮೋದಿ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡಿಕೊಂಡೇ ಬಂದಿದೆ. ಹತ್ತು ವರ್ಷಗಳ ಹಿಂದಿನಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅದಾನಿ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. 'ಹಮ್ ದೋ, ಹಮಾರಾ ದೋ' ಎಂಬುದಾಗಿ ಹೇಳುತ್ತಲೇ ಇದ್ದಾರೆ. ಇದು ಮೋದಿ-ಅಮಿತ್ ಶಾ, ಅಂಬಾನಿ-ಅದಾನಿ ಕುರಿತ ಹೇಳಿಕೆಯಾಗಿದೆ. ಈಗ ಅದಾನಿ ಕುರಿತು ಚಂದ್ರಬಾಬು ನಾಯ್ಡು ತಳೆದಿರುವ ನಿಲುವು ಬಿಜೆಪಿ-ಟಿಡಿಪಿ ಮೈತ್ರಿ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications