ಆಧಾರ್ ನಂತರ ನಾಗರಿಕರಿಗೆ ಹೊಸ ಗುರುತಿನ ಚೀಟಿ
ನವದೆಹಲಿ, ಆ.6: ಆಧಾರ್ ಗುರುತಿನ ಚೀಟಿ ನಂತರ ದೇಶದ ಎಲ್ಲಾ ನಾಗರಿಕರಿಗೆ ವಿಶಿಷ್ಟ ಗುರುತು ಚೀಟಿ ನೀಡುವುದಕ್ಕಾಗಿ ಬೃಹತ್ ಕಂಪ್ಯೂಟರ್ ಮಾಹಿತಿ ಕೋಶ (ಡಾಟಾಬೇಸ್) ಸ್ಥಾಪಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಭಾರತೀಯ ನಾಗರಿಕರ ನೋಂದಣಿ ಮಾಹಿತಿ ಕೋಶ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡುವ ಸಾಧ್ಯತೆಯಿದೆ. ಈ ಯೋಜನೆಯನ್ನು ಗೃಹ ಇಲಾಖೆಯು ಜಾರಿಗೊಳಿಸಲಿದೆ.
ಭಾರತೀಯ ನಾಗರಿಕರು ಯಾರು ಹಾಗೂ ಯಾರು ಅಲ್ಲ ಎಂಬುದನ್ನು ನಾವು ಗುರುತಿಸಬೇಕಾಗಿದೆಎಂದು ಕಳೆದ ತಿಂಗಳು ಗೃಹ ಸಚಿವ ರಾಜ್‌ನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದರು. ಅದರಂತೆ ಹೊಸ ಗುರುತಿನ ಚೀಟಿ ಕಾರ್ಯ ಯೋಜನೆ ಸಿದ್ಧವಾಗಿದೆ.
ಈ ಗುರುತುಚೀಟಿ ಪಡೆಯಲು ನಾಗರಿಕರು ಜನನ ಪ್ರಮಾಣಪತ್ರಗಳು ಮತ್ತು ಭೂದಾಖಲೆಗಳು ಸೇರಿದಂತೆ 20 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ದಾಖಲೆಗಳನ್ನು ಹೊಂದಿರದವರಿಗಾಗಿ ಗ್ರಾಮ ಮಟ್ಟದ ಸಂಸ್ಥೆಗಳು ಪ್ರತ್ಯೇಕ ತಪಾಸಣಾ ಪ್ರಕ್ರಿಯೆಯನ್ನು ರೂಪಿಸುತ್ತಿವೆ.

2009ರಲ್ಲಿ ಕೆಲವು ಲಕ್ಷ ಜನರನ್ನು ಗುರಿಯಾಗಿಸಿ ನಡೆಸಿದ ಮಾದರಿ ಅಧ್ಯಯನದ ವೇಳೆ, ಸಂದರ್ಶಿಸಲಾದ ಜನರ ಪೈಕಿ 85 ಶೇ. ಮಂದಿ ಮಾತ್ರ ಪ್ರಜೆಗಳ ಸ್ಥಾನಮಾನ ಹೊಂದಿದ್ದರು. ಸುಮಾರು 2 ಶೇ. ಮಂದಿ ಅಕ್ರಮ ವಲಸಿಗರಾಗಿದ್ದರು.
ಭಾರತೀಯ ಪ್ರಜೆಗಳ ಸ್ಥಾನಮಾನ ಹೊಂದದವರು ಹಾಗೂ 'ಅಕ್ರಮ ವಲಸಿಗರು' ಎಂಬ ವರ್ಗೀಕರಣಕ್ಕೊಳಗಾದವರ ಹಣೆಬರಹ ಏನು ಎಂಬುದನ್ನು ನಿರ್ಧರಿಸಬೇಕಾಗಿದೆ. ವಿಶಾಲ ವ್ಯಾಪ್ತಿಯಲ್ಲಿ ಎರಡು ಆಯ್ಕೆಗಳಿವೆ: ದೇಶ ತೊರೆಯುವಂತೆ ಅವರಿಗೆ ಸೂಚನೆ ನೀಡಬಹುದಾಗಿದೆ ಅಥವಾ ಸರಕಾರ ಅವರಿಗೆ ಕೆಲಸದ ಪರವಾನಿಗೆ (ವರ್ಕ್ ಪರ್ಮಿಟ್)ಗಳನ್ನು ಕೊಟ್ಟು ಭಾರತದಲ್ಲೇ ಇರಲು ಅವಕಾಶ ಮಾಡಿಕೊಡಬಹುದಾಗಿದೆ. ಈ ಅಂಶದ ಬಗ್ಗೆ ಸಂಪುಟ ಇನ್ನೂ ಚರ್ಚಿಸಲು ಆರಂಭಿಸಿಲ್ಲ ಎಂದು ಮೂಲಗಳು ಹೇಳಿವೆ.
ಈ ಮಾಹಿತಿ ಕೋಶ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಾಗ, ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ ಒಂದು ಸ್ಥಳದಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಪಟ್ಟಿ ಮಾಡುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಮತ್ತು ಭಾರೀ ಚಚೆರ್ಗೊಳಗಾದ ಆಧಾರ್ ಕಾರ್ಡ್ ತೆರೆಮರೆಗೆ ಸರಿಯಲಿದೆ. ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡಲು ಹಿಂದಿನ ಯುಪಿಎ ಸರಕಾರ ಜಾರಿಗೆ ತಂದ 12 ಅಂಕಿಗಳ ವಿಶಿಷ್ಟ ಸಂಖ್ಯೆಯನ್ನು ಪ್ರತಿ ಪ್ರಜೆಗೆ ಆಧಾರ್ ಯೋಜನೆ ನೀಡುತ್ತದೆ.












Click it and Unblock the Notifications