2022-2023ರಲ್ಲಿ ಜಾಹೀರಾತಿಗಾಗಿ ಕೇಂದ್ರ ಸರ್ಕಾರ ವ್ಯಯಿಸಿದ್ದು ಬರೋಬ್ಬರಿ 408.46 ಕೋಟಿ ರೂ.!
ನವದೆಹಲಿ, ಆಗಸ್ಟ್. 03: ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಹೊರಾಂಗಣ ಪ್ರಚಾರಕ್ಕಾಗಿ 2022-23 ರ ನಡುವೆ ಸರ್ಕಾರಿ ಜಾಹೀರಾತುಗಳಿಗಾಗಿ ಕೇಂದ್ರವು ಒಟ್ಟು 408.46 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ.
2022-23ರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 155.27 ಕೋಟಿ ರೂಪಾಯಿ, ಮುದ್ರಣ ಮಾಧ್ಯಮಕ್ಕೆ 220.34 ಕೋಟಿ ರೂಪಾಯಿ ಮತ್ತು ಹೊರಾಂಗಣ ಪ್ರಚಾರಕ್ಕಾಗಿ 32.85 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಠಾಕೂರ್ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರವನ್ನು ಓದಿದ್ದಾರೆ. ಕೇಂದ್ರ ಸರ್ಕಾರ ಜಾಹೀರಾತಿಗೆ ಮಾಡಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.

ಸಿಪಿಐ(ಎಂ) ರಾಜ್ಯಸಭಾ ಸಂಸದ ಎಎ ರಹೀಮ್ ಅವರು ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಸರ್ಕಾರಿ ಜಾಹೀರಾತುಗಳಿಗೆ ಖರ್ಚು ಮಾಡಿದ ಹಣದ ವಿವರಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿದರು. ಅನುರಾಗ್ ಠಾಕೂರ್ ಮಂಡಿಸಿದ ಉತ್ತರದಲ್ಲಿ, ಕೇಂದ್ರ ಸಚಿವರು ಕೋಷ್ಟಕ ರೂಪದಲ್ಲಿ, ಕಳೆದ ಐದು ವರ್ಷಗಳಲ್ಲಿ ಮೂರು ಸ್ವರೂಪಗಳಲ್ಲಿ ಜಾಹೀರಾತುಗಳ ವಿವರವಾದ ವಿವರಣೆಯನ್ನು ನೀಡಿದ್ದಾರೆ.
ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳಿಗಾಗಿ (2018-19) ಸರ್ಕಾರವು 429.55 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದರೆ, ಮುಂದಿನ ಹಣಕಾಸು ವರ್ಷದಲ್ಲಿ 2019-20 ರಲ್ಲಿ 295.06 ಕೋಟಿ ರೂಪಾಯಿಯಾಗಿದೆ. 2020-21 ರಲ್ಲಿ ಈ ಹಣ 2020-21 ರಲ್ಲಿ 197.49 ಕೋಟಿ ರೂಪಾಯಿಯಾಗಿತ್ತು. 2021-22 ರಲ್ಲಿ 179.04 ಕೋಟಿ ರೂಪಾಯಿಯಾಗಿದೆ.

ವಿದ್ಯುನ್ಮಾನ ಮಾಧ್ಯಮವು 2018-19 ರಲ್ಲಿ ಗಣನೀಯವಾಗಿ ಹೆಚ್ಚಿದ್ದು, 514.29 ಕೋಟಿ ರೂಪಾಯಿ ನೀಡಲಾಗಿದೆ. ನಂತರದ ವರ್ಷಗಳಲ್ಲಿ ಅಂದರೆ 2019-20ರಲ್ಲಿ 316.99 ಕೋಟಿ ರೂಪಾಯಿ, 2020-21 ರಲ್ಲಿ 167.90 ಕೋಟಿ ರೂಪಾಯಿಯಾಗಿದೆ. 2021-22 ರಲ್ಲಿ 101.24 ಕೋಟಿ ರೂ. ಮತ್ತು 2022-23 ರಲ್ಲಿ 155.27 ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಹೊರಾಂಗಣ ಪ್ರಚಾರಕ್ಕಾಗಿ 2018-19ರಲ್ಲಿ 235.33 ಕೋಟಿ ರೂ. , 2019-20ರಲ್ಲಿ 96.14 ಕೋಟಿ, 2020-21 ರಲ್ಲಿ 44.08 ಕೋಟಿ, 2021-22ರಲ್ಲಿ 35.7 ಕೋಟಿ ಹಾಗೂ 2022-23ರಲ್ಲಿ 32.85 ಕೋಟಿ ವೆಚ್ಚ ಮಾಡಲಾಗಿದೆ. ಎಲ್ಲಾ ವೆಚ್ಚವನ್ನು ಸರ್ಕಾರವು ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ (ಸಿಬಿಸಿ) ಮೂಲಕ ಮಾಡಿದೆ ಎಂದು ಸಚಿವ ಅನುರಾಗ್ ಠಾಕೂರ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.












Click it and Unblock the Notifications