ವಾರದಲ್ಲಿ 4 ದಿನಗಳ ಕೆಲಸ ಬಗ್ಗೆ ಕಾರ್ಮಿಕ ಸಚಿವರ ಸ್ಪಷ್ಟನೆ
ನವದೆಹಲಿ, ಮಾರ್ಚ್ 25: ವಾರಕ್ಕೆ 48 ಗಂಟೆಗಳ ಕೆಲಸ ಅಥವಾ ವಾರದಲ್ಲಿ 4 ದಿನಗಳ ಕೆಲಸ ವಿಧಿಸುವ ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಯನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಇಂಥ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ದೇಶದಲ್ಲಿ ಉದ್ಯೋಗಿಗಳ ಕಾರ್ಯ ವಿಧಾನ ಹಾಗೂ ಪರಿಸರದಲ್ಲಿ ಭಾರಿ ಬದಲಾವಣೆಯಾಗಿದ್ದು, ಇದಕ್ಕೆ ತಕ್ಕಂತೆ ಸರ್ಕಾರ ಹೊಸ ನೀತಿಗಳನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದರು. ವಾರಕ್ಕೆ 40 ಅಥವಾ 48 ಗಂಟೆಗಳ ಕೆಲಸ ಅವಧಿ ಜಾರಿ ಬಗ್ಗೆ ದೇಶದೆಲ್ಲೆಡೆ ಚರ್ಚೆ ಆರಂಭವಾಗಿತ್ತು. ಆದರೆ, ಕೇಂದ್ರ ಸರ್ಕಾರಿ ನೌಕರರಿಗೆ ಇಂಥ ಯಾವುದೇ ವ್ಯವಸ್ಥೆ ಜಾರಿಗೆ ತರುತ್ತಿಲ್ಲ ಎಂದು ಸಚಿವ ಸಂತೋಷ್ ಹೇಳಿದ್ದಾರೆ.
ಕಾರ್ಮಿಕರ ಕೆಲಸದ ಅವಧಿ, ರಜಾ ದಿನ, ಕೆಲಸದ ದಿನಗಳು, ಸಂಬಳ, ಕೈಗಾರಿಕೆ ಸಂಬಂಧ, ಸುರಕ್ಷತೆ, ಆರೋಗ್ಯ ಹಾಗೂ ಉದ್ಯೋಗ ಸ್ಥಳದ ವಾತಾವರಣ, ಸಾಮಾಜಿಕ ಸುರಕ್ಷತೆ ನೀತಿ ನಿಬಂಧನೆಗಳನ್ನು ಕೇಂದ್ರ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಇಲಾಖೆ ಜಾರಿಗೊಳಿಸುತ್ತದೆ.

ದಿನಕ್ಕೆ 12 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 4 ದಿನ, ದಿನಕ್ಕೆ 10 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 5 ದಿನ ಅಥವಾ 8 ಗಂಟೆ ಪ್ರತಿದಿನದ ಕೆಲಸದಂತೆ ವಾರಕ್ಕೆ 6 ದಿನಗಳ ಕೆಲಸ ವಿಧಿಸಲು ಸಂಸ್ಥೆಗಳಿಗೆ ಅನುಮತಿ ನೀಡುವ ಬಗ್ಗೆ ಈ ಹಿಂದಿನ ವೇತನ ಆಯೋಗದಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಜಾರಿಗೊಳಿಸಿರಲಿಲ್ಲ. ಸದ್ಯಕ್ಕೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.












Click it and Unblock the Notifications