7th Pay Commission; ಕೇಂದ್ರ ಸರ್ಕಾರಿ ನೌಕರರ ಗ್ರಾಚ್ಯುಟಿ ಹೆಚ್ಚಳ
ನವದೆಹಲಿ, ಜೂನ್ 03: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ. ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳದ ಬಳಿಕ ಬಂದಿರುವ ಈ ಸುದ್ದಿ ನೌಕರರಿಗೆ ಸಂತಸ ತಂದಿದೆ. ಗ್ರಾಚ್ಯುಟಿ ಹೆಚ್ಚಳ ಕುರಿತು ಸರ್ಕಾರ ಆದೇಶಿಸಿದೆ.
ಗ್ರಾಚ್ಯುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನೀಡಲಾಗುವ ಗೌರವಧನ. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರ ಗ್ರಾಚ್ಯುಟಿ ಹೆಚ್ಚಳ ಮಾಡಲಿದೆ.

ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಈ ಹೆಚ್ಚಳವಾಗಲಿದ್ದು, ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಲೋಕಸಭೆ ಚುನಾವಣೆಗೂ ಮೊದಲು ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ, ಈಗ ಗ್ರಾಚ್ಯುಟಿ ಹೆಚ್ಚಳ ಮಾಡಿದೆ.
ಗ್ರಾಚ್ಯುಟಿ ಹೆಚ್ಚಳದ ವಿವರಗಳು: ಕೇಂದ್ರ ಸರ್ಕಾರ ಈಗ ನಿವೃತ್ತಿ, ಮರಣ ನಂತರದ ಗ್ರಾಚ್ಯುಟಿಯನ್ನು ಶೇ 25ರಷ್ಟು ಏರಿಕೆ ಮಾಡಲಿದೆ. ಇದರಿಂದಾಗಿ ಈಗಿರುವ ಗ್ರಾಚ್ಯುಟಿ 20 ರಿಂದ 25 ಲಕ್ಷಕ್ಕೆ ಏರಿಕೆಯಾಗಲಿದೆ.
ನಿವೃತ್ತಿ, ಮರಣ ನಂತರದ ಗ್ರಾಚ್ಯುಟಿಯ ಶೇ 25ರಷ್ಟು ಏರಿಕೆ ಜನವರಿ 1, 2024ರಿಂದಲೇ ಜಾರಿಗೆ ಬರಲಿದೆ. ಮೇ 30, 2024ರ ಕಛೇರಿ ಆದೇಶದಲ್ಲಿ 7ನೇ ವೇತನ ಆಯೋಗದ ಶಿಫಾರಸು ಅನ್ವಯ ಗ್ರಾಚ್ಯುಟಿಯನ್ನು ಶೇ 25ರಷ್ಟು ಏರಿಕೆ ಮಾಡಲಾಗಿದೆ ಎಂದು ಹೇಳಿದೆ. ಏಪ್ರಿಲ್ 30ರಂದು ಈ ಕುರಿತು ತೀರ್ಮಾನಿಸಲಾಗಿತ್ತು. ಮೇ ತಿಂಗಳಿನಲ್ಲಿ ಆದೇಶ ಹೊರಡಿಸಲಾಗಿದೆ.
ಜನವರಿ 1 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ 5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಈಗ ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಮತ್ತೆ ಹೆಚ್ಚಳವಾಗಲಿದ್ದು, ಒಟ್ಟು ತುಟ್ಟಿಭತ್ಯೆ ಶೇ 55ರಷ್ಟಾಗುವ ಸಾಧ್ಯತೆ ಇದೆ. ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ ಬಳಿಕ ಈಗ ನಿವೃತ್ತಿ, ಮರಣ ನಂತರದ ಗ್ರಾಚ್ಯುಟಿಯನ್ನು ಏರಿಕೆ ಮಾಡಲಾಗಿದೆ.
ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳದ ಕುರಿತು ನಿರ್ಧಾರವನ್ನು ಕೈಗೊಳ್ಳಲಿದೆ. ಡಿಎ ಎಷ್ಟು ಏರಿಕೆಯಾದರೂ ಅದು ಜುಲೈ 2024ರಿಂದ ಪೂರ್ವಾನ್ವಯವಾಗುವಂತೆ ಏರಿಕೆಯಾಗುತ್ತದೆ.
ಈ ವರ್ಷದ ಜನವರಿಯಲ್ಲಿ 2024ರಲ್ಲಿ ಡಿಎ ಹೆಚ್ಚಳ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರು ಶೇ 50ರಷ್ಟು ಡಿಎ ಪಡೆಯುತ್ತಿದ್ದಾರೆ. ಈಗ ಶೇ 5ರಷ್ಟು ಡಿಎ ಹೆಚ್ಚಳವಾದರೆ ಡಿಎ ಶೇ 55ರಷ್ಟಾಗುತ್ತದೆ.
ಈ ಹಿಂದಿನ ಹಲವು ಹಲವು ವರ್ಷಗಳ ದಾಖಲೆಗಳನ್ನು ನೋಡಿದರೆ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಸೆಪ್ಟೆಂಬರ್‌ನಲ್ಲಿ ತೀರ್ಮಾನ ಕೈಗೊಳ್ಳುತ್ತದೆ. ಅದು ಜುಲೈನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಪ್ರಭಾರ ಭತ್ಯೆ, ಉನ್ನತ ಶಿಕ್ಷಣ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ ಮುಂತಾದವು ಸೇರಿ 6 ಭತ್ಯೆಗಳು ಏರಿಕೆಯಾಗಲಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಏಪ್ರಿಲ್ 2, 2024ರ ಸೂಚನೆಯಂತೆ ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ. 2016ರ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಭತ್ಯೆಗಳನ್ನು ನೀಡಲಾಗುತ್ತದೆ.












Click it and Unblock the Notifications