CBSE ಪರೀಕ್ಷಾ ದಿನಾಂಕದಲ್ಲಿ ಮಹತ್ವದ ಬದಲಾವಣೆ
ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣದ ಹಬ್ಬದಿಂದ ಎಲ್ಲೆಡೆ ರಂಗು ತುಂಬಿದ್ದರೆ, ಈ ಮಧ್ಯೆ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜಾಗಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಭಾರತದಲ್ಲಿ ಹೆಚ್ಚಿನ ಭಾಗಗಳಲ್ಲಿ ಹೋಳಿ ಹಬ್ಬವನ್ನು ಇಂದು (ಮಾರ್ಚ್ 14) ಶುಕ್ರವಾರದಂದು ಆಚರಿಸಲಾಗುತ್ತಿದೆ. ಆದರೆ ಕೆಲವು ಪ್ರದೇಶಗಳಲ್ಲಿ ನಾಳೆ ಅಂದರೆ ಮಾರ್ಚ್ 15ರ ಸಂಜೆಯವರೆಗೂ ಹಬ್ಬದ ಆಚರಣೆ ಮುಂದುವರಿಯುತ್ತದೆ. ಈ ಕಾರಣದಿಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ ) ಮಾರ್ಚ್ 15, 2025ರಂದು ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಹೊಸ ನಿಬಂಧನೆಯನ್ನು ಘೋಷಿಸಿದೆ.

ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ನಾಳೆ ಅಂದರೆ ಮಾರ್ಚ್ 15ರಂದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ಪರೀಕ್ಷೆ ಬರೆಯುವ ಅವಕಾಶ ನೀಡಲು ಸಿಬಿಎಸ್‌ಇ ನಿರ್ಧರಿಸಿದೆ. ಹೀಗಾಗಿ ಎಲ್ಲೆಲ್ಲಿ ನಾಳೆಯೂ ಹೋಳಿ ಹಬ್ಬದ ಆಚರಣೆ ಮುಂದುವರಿಯುತ್ತದೆಯೋ, ಆ ಪ್ರದೇಶದ ವಿದ್ಯಾರ್ಥಿಗಳು ಮಾರ್ಚ್ 15ರ ದಿನದಂದು ಪರೀಕ್ಷೆ ಬರೆಯಲು ನಿರಾಕರಿಸಬಹುದು. ಬದಲಿಗೆ ಸಿಬಿಎಸ್‌ಇ ನೀಡುವ ಮುಂದಿನ ದಿನಾಂಕದಂದು ತಾವು ಬರೆಯಬೇಕಾಗಿದ್ದ ಪರೀಕ್ಷೆಯನ್ನು ಬರೆಯಬಹುದಾಗಿದೆ.
ಸದ್ಯದ ಸಿಬಿಎಸ್‌ಇ ಬೋರ್ಡ್ ಪರೀಕ್ಷಾ ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ಹಿಂದಿ ಕೋರ್ (302) ಮತ್ತು ಹಿಂದಿ ಐಚ್ಛಿಕ (002) ಪರೀಕ್ಷೆಗಳು ಮಾರ್ಚ್ 15ರಂದು ನಿಗದಿಯಾಗಿದೆ. ಈ ಪರೀಕ್ಷೆಗಳನ್ನು ನಾಳೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಮುಂದೆ ಘೋಷಿಸುವ ದಿನಾಂಕದಂದು ಪರೀಕ್ಷೆ ಬರೆಯಬಹುದಾಗಿದೆ. ಇನ್ನು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 2ರವರೆಗೆ ನಡೆಯಲಿದ್ದು, 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮಾರ್ಚ್ 18ರೊಳಗೆ ಮುಕ್ತಾಯಗೊಳ್ಳಲಿದೆ.

ಇನ್ನು ಈ ಬಗ್ಗೆ ಮಹತ್ವದ ಸೂಚನೆ ನೀಡಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ, 'ಮಾರ್ಚ್ 15ರಂದು ನಿಗದಿಯಂತೆ ಪರೀಕ್ಷೆ ನಡೆಯಲಿದ್ದು, ಆ ದಿನ ಹಾಜರಾಗಲು ಕಷ್ಟಪಡುವ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಬಹುದು. ಸಿಬಿಎಸ್‌ಇ ನೀತಿಯ ಪ್ರಕಾರ ಅವರಿಗೆ ವಿಶೇಷ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು' ಎಂದು ತಿಳಿಸಿದೆ. ಇನ್ನು ನಾಳೆ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳು ಮುಂದಿನ ವಿಶೇಷ ಪರೀಕ್ಷೆಗೆ ಹೇಗೆ ಅರ್ಜಿ ಸಲ್ಲಿಸಬಹುದು ಎನ್ನುವುದರ ಕುರಿತು ಹೆಚ್ಚಿನ ವಿವರಗಳನ್ನು ಸಿಬಿಎಸ್‌ಇ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.












Click it and Unblock the Notifications