Bihar Election 2025: ಮೊದಲ ಹಂತದ ಮತದಾನಕ್ಕೆ ದಿನಗಣನೆ, ಸರ್ವ ಪಕ್ಷಗಳ ನಾಯಕರ ಭರ್ಜರಿ ಪ್ರಚಾರ
ನವದೆಹಲಿ, ನವೆಂಬರ್ 03: ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಮುಕ್ತಾಯಗೊಳ್ಳಲು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಎಲ್ಲ ಪಕ್ಷಗಳ ಘಟಾನುಘಟಿ ನಾಯಕರು ಈಗಾಗಲೇ ರ್ಯಾಲಿ, ಮೆರವಣಿಗೆ ನಡೆಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಚಾರ ನಡೆಸಿದ್ದಾರೆ. ಗೆಲುವಿನ ವಿಶ್ವಾಸದಲ್ಲಿ ಚುನಾವಣೆ ಎದುರಿಸಲಿದ್ದಾರೆ.
NDA ಮತ್ತು ಮಹಾಮೈತ್ರಿಕೂಟದ ಸ್ಟಾರ್ ಪ್ರಚಾರಕರು ಮತ್ತು ಹಿರಿಯ ನಾಯಕರು ಪ್ರಚಾರದಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ರಿಂದ ಹಿಡಿದು ಅನೇಕ ಎನ್‌ಡಿಎ ಪ್ರಮುಖ ನಾಯಕರು ಬಿಹಾರದಲ್ಲಿ ಪ್ರಚಾರ ಮಾಡಿದ್ದಾರೆ. ಇತ್ತ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಮೈತ್ರಿಕೂಟದ ನಾಯಕರು ಭರ್ಜರಿ ರ್ಯಾಲಿ ನಡೆಸಿದ್ದಾರೆ. ಪ್ರಚಾರ ಮೂಲಕ ಅಭ್ಯರ್ಥಿಗಳನ್ನು ಬೆಂಬಲಿಸುವ ಜೊತೆಗೆ ಮತದಾರರನ್ನು ಆಕರ್ಷಿಸಿದ್ದಾರೆ. ಮೊದಲ ಹಂತದ ಪ್ರಚಾರವು ನಾಳೆ ನವೆಂಬರ್ 04ರಂದು ಸಂಜೆ ಕೊನೆಗೊಳ್ಳಲಿದೆ.

ಭಾನುವಾರ, ಇಂದು ಸೋಮವಾರ ಎರಡನೇ ಹಂತದಲ್ಲಿ ಮತದಾನದ ಕ್ಷೇತ್ರಗಳಲ್ಲಿ ರಾಜಕೀಯ ನಾಯಕರು ಮಹತ್ವದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ರ್ಯಾಲಿಗಳ ಮೂಲಕ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕವೂ ಮತದಾರರನ್ನು ತಲುಪುತ್ತಿದ್ದಾರೆ. ಹಿರಿಯ ನಾಯಕರು ಹಾಗೂ ಪಕ್ಷಗಳ ಸ್ಟಾರ್ ಪ್ರಚಾರಕರ ಎಂಟ್ರಿಯಿಂದ ಚುನಾವಣಾ ಕಣ ರಂಗೇರಿತ್ತು. ಮೊದಲ ಹಂತದ ಚುನಾವಣೆ ಪ್ರಚಾರ ಮುಕ್ತಾಯ ಹೊತ್ತಿನಲ್ಲೇ ಎರಡನೇ ಹಂತದ ಚುನಾವಣೆ ಕಣದಲ್ಲಿ ಇದೇ ಸ್ಟಾರ್ ಪ್ರಚಾರಕರು, ಹಿರಿಯ ನಾಯಕರು ಭರ್ಜರಿ ಪ್ರಚಾರ ಆರಂಭಿಸಲಿದ್ದಾರೆ.
ಪಾಟ್ನಾದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಎರಡು ಕಡೆ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಚುನಾವಣೆ, ಮತದಾನ ಕುರಿತು ತಿಳಿಸಿದರು. ಮತದಾರರು ಆಕರ್ಷಿಸಿದರು. ಸೋಮವಾರ ಮೋದಿ ಸಹರ್ಸಾ ಮತ್ತು ಕತಿಹಾರ್‌ನಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಿದರು. ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೀತಾಮರ್ಹಿ ಮತ್ತು ಮಧುಬನಿಯಲ್ಲಿ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಚಾಣಕ್ಯನ ಪ್ರಚಾರ ನೀತಿಯಿಂದ ಪಕ್ಷದ ಅಭ್ಯರ್ಥಿಗಳು ಉತ್ಸುಕರಾಗಿದ್ದಾರೆ. ಶಾ ಎಂಟ್ರಿಯಿಂದ ಸ್ಪರ್ಧಾರ್ಥಿಗಳಿಗೆ ಆನೆ ಬಲ ಬಂದಂತಾಗಿದೆ.
ಸಹರ್ಸಾದಲ್ಲಿ ಚುನಾವಣಾ ರ್ಯಾಲಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಮಹಾಘಟಬಂಧನ್ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಮತದಾರರು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಪ್ರಸಾದ್ ಯಾದವ್ ಅವರು ಬಕ್ಸಾರ್, ಭೋಜ್‌ಪುರ, ಸರನ್, ಪಾಟ್ನಾ ಮತ್ತು ನಳಂದ ಜಿಲ್ಲೆಗಳಲ್ಲಿ 15 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸ್ಟಾರ್ ಪ್ರಚಾರಕರು ಇಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಹಾರದಲ್ಲಿನ 243 ಸದಸ್ಯ ಸ್ಥಾನಕ್ಕೆ ಒಟ್ಟು ಎರಡು ಹಂತಗಳಲ್ಲಿ ಅಂದರೆ ನವೆಂಬರ್ 06 ಮತ್ತು ನವೆಂಬರ್ 11ರಂದು ಚುನಾವಣೆ ನಡೆಯಲಿದೆ. ಇಲ್ಲಿನ ಪಕ್ಷವೊಂದು ಅಧಿಕಾರಕ್ಕೆ ಬರಲು 122 ಸ್ಥಾನ ಪಡೆಯುವುದು ಅನಿವಾರ್ಯವಗಿದೆ.












Click it and Unblock the Notifications