By Election Results 2021: ಖಾಂಡ್ವಾ ಸೇರಿ 3 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ನವದೆಹಲಿ ನವೆಂಬರ್ 2: 13 ರಾಜ್ಯಗಳ 29 ವಿಧಾನಸಭಾ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಮಧ್ಯಪ್ರದೇಶದ ಲೋಕಸಭೆ ಕ್ಷೇತ್ರ ಖಾಂಡ್ವಾ ಮತ್ತು ಇತರ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಅಸ್ಸಾಂನಲ್ಲಿ ಕೇಸರಿ ಪಡೆ ಹಾಗೂ ಅದರ ಮಿತ್ರಪಕ್ಷಗಳು ಅಸ್ಸಾಂನ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ ಅಭ್ಯರ್ಥಿಗಳಾದ ಫಣಿಧರ್ ತಾಲೂಕ್ದಾರ್, ರೂಪಜ್ಯೋತಿ ಕುರ್ಮಿ ಮತ್ತು ಸುಶಾಂತ ಬೊರ್ಗೊಹೈನ್ ಕ್ರಮವಾಗಿ ಭಬಾನಿಪುರ, ಮರಿಯಾನಿ ಮತ್ತು ಥೌರಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಈಶಾನ್ಯ ರಾಜ್ಯಗಳು ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಮನ್ನಡೆಯಲ್ಲಿದೆ. ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಹಿಮಾಚಲ ಪ್ರದೇಶದ ಮಂಡಿ ಸಂಸದೀಯ ಸ್ಥಾನ ಮತ್ತು ಫತೇಪುರ್, ಅರ್ಕಿ ಮತ್ತು ಜುಬ್ಬಾಯಿ-ಕೊತ್ಕೈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ರಾಜಸ್ಥಾನದ ಎರಡೂ ಸ್ಥಾನಗಳಲ್ಲೂ ಪಕ್ಷ ಮುಂದಿದೆ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಎಲೆನಾಬಾದ್‌ನಲ್ಲಿ ಐಎನ್‌ಎಲ್‌ಡಿಯ ಅಭಯ್ ಚೌಟಾಲಾ ಮುನ್ನಡೆಯಲ್ಲಿದ್ದಾರೆ.
ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ಮತ್ತು ಪ್ರಮುಖ ಪ್ರತಿಪಕ್ಷ ಆರ್‌ಜೆಡಿ ತಲಾ ಒಂದು ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಅಸ್ಸಾಂನ ಭಬಾನಿಪುರ ಮತ್ತು ಥೌರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುಂದಿದ್ದಾರೆ.
ಕರ್ನಾಟಕದ ಹಾನಗಲ್ ಮತ್ತು ಸಿಂಧಗಿಯಲ್ಲಿ ಮತ ಎಣಿಕೆ ನಡೆಯುತ್ತಿದ್ದು ಸಿಂಧಗಿಯಲ್ಲಿ ಬಿಜೆಪಿಗೆ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸಿಂದಗಿಯಲ್ಲಿ 19 ನೇ ಹಾಗೂ ಕೊನೆಯ ಸುತ್ತು ಸೇರಿ ಒಟ್ಟು ಮತಗಳಲ್ಲಿ ಕಾಂಗ್ರೆಸ್‌ಗೆ 56487 ಮತಗಳು, ಜೆಡಿಎಸ್ ಗೆ 3729 ಮತಗಳು ಹಾಗೂ ಬಿಜೆಪಿಗೆ 84650 ಮತಗಳು ಲಭಿಸಿದ್ದು 28163 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇನ್ನೂ ಹಾನಗಲ್ ನಲ್ಲಿ ಐದು ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆದರೆ ಇನ್ನೂ ಹಲವಾರು ಸುತ್ತಿನ ಮತ ಎಣಿಕೆ ಬಾಕಿ ಇದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಅಧಿಕ ಮತಗಳು ಬೀಳುವ ಸಾಧ್ಯತೆ ಇದೆ.
ಉಪಚುನಾವಣೆಗೆ ನಡೆದ ಮೂರು ಲೋಕಸಭೆ ಮತ್ತು 29 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ವೇಳೆ ಶೇ.50ರಿಂದ ಶೇ.80ರಷ್ಟು ಮತದಾನವಾಗಿದೆ. ಇಂದು 13 ರಾಜ್ಯಗಳ 29 ವಿಧಾನಸಭಾ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಅಕ್ಟೋಬರ್ 30 ರಂದು ಉಪಚುನಾವಣೆಗಳು ನಡೆದಿದ್ದವು. ಅಸ್ಸಾಂನಲ್ಲಿ ಐದು, ಪಶ್ಚಿಮ ಬಂಗಾಳದ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ಕರ್ನಾಟಕದಲ್ಲಿ ತಲಾ ಎರಡು ಸ್ಥಾನಗಳಲ್ಲಿ ಹೆಚ್ಚಿನ ಮತದಾನ ಎಣಿಕೆ ಪೂರ್ಣಗೊಳ್ಳಲಿದೆ. ರಾಜಸ್ಥಾನ ಮತ್ತು ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ತಲಾ ಒಂದು ಸ್ಥಾನವಿದೆ. ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಸಾಗುತ್ತಿದೆ.
ಇನ್ನೂ ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗಳ ಎಣಿಕೆ ನಡೆಯುತ್ತಿರುವ ರಾಜ್ಯಗಳಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗವು ತನ್ನ ಚುನಾವಣಾ ಅಧಿಕಾರಿಗಳಿಗೆ ನೆನಪಿಸಿದೆ. ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರದಲ್ಲಿ ಅಕ್ಟೋಬರ್ 30 ರಂದು ಉಪಚುನಾವಣೆಗಳು ನಡೆದವು, ಏಪ್ರಿಲ್‌ನಲ್ಲಿ ಹೊರಡಿಸಲಾದ ವಿಜಯ ಮೆರವಣಿಗೆಗಳನ್ನು ನಿಷೇಧಿಸುವ ಸೂಚನೆಗಳು ಇತ್ತೀಚಿನ ಉಪಚುನಾವಣೆಗಳಿಗೂ ಅನ್ವಯಿಸುತ್ತವೆ ಎಂದು ಆಯೋಗ ಹೇಳಿದೆ.