ಶಬರಿಮಲೆ ಯಾತ್ರಿಕರಿದ್ದ ಬಸ್ ಪಲ್ಟಿ, ಕೋಲಾರ ಜಿಲ್ಲೆಯ 13ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಕೇರಳ, ಅಕ್ಟೋಬರ್, 18: ಶಬರಿಮಲೆಗೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಪಲ್ಟಿಯಾಗಿದ್ದು, ಈ ವೇಳೆ ಕೋಲಾರ ಜಿಲ್ಲೆಯ 13ಕ್ಕೂ ಹೆಚ್ಚು ಶಬರಿಮಲೆ ಯಾತ್ರಿಕರು ಗಾಯಗೊಂಡಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೊಟ್ಟಾಯಂ ಜಿಲ್ಲೆಯ ಎರುಮೇಲಿ ಸಮೀಪದ ಕನಮಲ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕೋಲಾರ ಜಿಲ್ಲೆಯಿಂದ ಬಂದ ಯಾತ್ರಾರ್ಥಿಗಳು ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, 40 ಯಾತ್ರಾರ್ಥಿಗಳು ಸೇರಿದಂತೆ 43 ಮಂದಿ ವಾಹನದಲ್ಲಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಗಾಯಗೊಂಡ ನಾಲ್ವರು ಯಾತ್ರಾರ್ಥಿಗಳನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಶಬರಿಮಲೆ ಅಯ್ಯಪ್ಪ ದೇಗುಲವನ್ನು ತುಲಾ ಮಾಸಂ ಪೂಜೆಗಾಗಿ ಅಕ್ಟೋಬರ್ 17ರಂದು ಪೂಜಕರಿಗೆ ಮತ್ತೆ ತೆರೆಯಲಾಗಿದೆ ಎಂದು ತಿರುವಾಂಕೂರು ದೇವಸ್ವಂ ತಿಳಿಸಿದೆ.
'ತುಲಾ ಮಾಸಂ' ಎಂಬುದು ಮಲಯಾಳಂ ಕ್ಯಾಲೆಂಡರ್‌ನ ಪ್ರಕಾರ 'ತುಲಂ' ತಿಂಗಳಲ್ಲಿ ಮಾಸಿಕ ಪ್ರಾರ್ಥನೆ ಆಗಿದೆ. ಅಲ್ಲದೆ, ಮಾಸಿಕ ಪ್ರಾರ್ಥನೆಗಳನ್ನು ಪೂರ್ಣಗೊಳಿಸಿದ ನಂತರ ಅಕ್ಟೋಬರ್ 22ರಂದು ದೇವಾಲಯವನ್ನು ಮುಚ್ಚಲಾಗುತ್ತದೆ.
ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಟಿಟಿ ವಾಹನ ರಸ್ತೆ ಮಧ್ಯೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಬಳಿ ನಡೆದಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆಂದು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದು ಕೆಲವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನ ಮೂಲತಃ ಕಾರವಾರ ಜಿಲ್ಲೆಯ ಶಿರಸಿ ಮೂಲದ್ದಾಗಿದೆ ಎಂದು ತಿಳಿದುಬಂದಿದೆ.
ರಸ್ತೆ ಮಧ್ಯೆ ಪಲ್ಟಿಯಾದ ಟಿಟಿ ವಾಹನ ಸುಮಾರು 50 ಅಡಿಯಷ್ಟು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದೆ. ವಾಹನ ಚಾಲಕ ಅತಿಯಾದ ವೇಗವಾಗಿ ಇದ್ದ ಕಾರಣದಿಂದಲೇ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಂತಹ ದುರ್ಘಟನೆ ಸಂಭವಿಸಿಲ್ಲ. ವಾಹನ ಪಟ್ಟಿಯಾದ ಕೂಡಲೇ ಸ್ಥಳೀಯರು ಗಾಡಿಯಲ್ಲಿದ್ದವರನ್ನು ಹೊರ ತಂದು ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲವರನ್ನು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications