Budget 2024 ಕರ್ನಾಟಕಕ್ಕೆ ಎಷ್ಟು ವಂದೇ ಭಾರತ್ ರೈಲು?
ಬೆಂಗಳೂರು, ಜನವರಿ 29: ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ. ನಗರಗಳನ್ನು ಅತ್ಯಂತ ವೇಗವಾಗಿ ಸಂಪರ್ಕಿಸುವ ರೈಲುಗಳು ಪ್ರಯಾಣಿಕರ ಸಮಯ ಉಳಿಸುತ್ತಿವೆ. ಈ ರೈಲಿನ ದರಗಳು ಹೆಚ್ಚು ಎಂಬ ಆರೋಪದ ನಡುವೆಯೇ ರೈಲು ಜನರಿಗೆ ಇಷ್ಟವಾಗಿವೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಇದು ಮಧ್ಯಂತರ ಬಜೆಟ್ ಆಗಿದೆ. ಆದರೆ ಚುನಾವಣೆ ಇರುವುದರಿಂದ ಬಜೆಟ್‌ನಲ್ಲಿ ಹಲವು ಜನಪ್ರಿಯ ಘೋಷಣೆಗಳ ನಿರೀಕ್ಷೆ ಇದೆ.

ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನ ಮಾಡಲಾಗಿದೆ. ಆದ್ದರಿಂದ ರೈಲ್ವೆಗೆ ಸಂಬಂಧಿಸಿದ ಘೋಷಣೆಗಳು ಸಹ ಸಾಮಾನ್ಯ ಬಜೆಟ್‌ನಲ್ಲಿಯೇ ಆಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ಎಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘೋಷಣೆಯಾಗಲಿದೆ? ಎಂಬುದು ಕುತೂಹಲ.
ಕರ್ನಾಟಕಕ್ಕೆ ಎಷ್ಟು ರೈಲು?; 25 ಸಂಸದರು ಗೆದ್ದಿರುವ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಎಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಗಲಿದೆ? ಎಂಬುದು ಜನರ ಕುತೂಹಲವಾಗಿದೆ. ಈಗಾಗಲೇ ರಾಜ್ಯದಲ್ಲಿ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ, ಬೆಂಗಳೂರು-ಕೊಯಮತ್ತೂರು ಮತ್ತು ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ.
ಬೆಂಗಳೂರು-ಧಾರವಾಡ ವಯಾ ಹುಬ್ಭಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ರೈಲು ಸೇವೆ ಆರಂಭಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮೂಲ ಸೌಕರ್ಯಗಳ ಕೊರತೆಯ ಕಾರಣ ರೈಲು ಸಂಚಾರ ವಿಳಂಬವಾಗುತ್ತಿದೆ.
ನೈಋತ್ಯ ರೈಲ್ವೆ 19/7/2023ರಂದು ನಡೆಸಿದ ಸಭೆಯಲ್ಲಿ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸುವ ಕುರಿತು ಚರ್ಚೆ ನಡೆದಿತ್ತು. ಆಗ ವಿವಿಧ ಮಾರ್ಗದಲ್ಲಿ ರೈಲು ಓಡಿಸಲು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಬೇಕು ಎಂದು ನೈಋತ್ಯ ರೈಲ್ವೆ ಸುತ್ತೋಲೆಯನ್ನು ಹೊರಡಿಸಿತ್ತು. ಆಗ 10 ಮಾರ್ಗಗಳನ್ನು ಉಲ್ಲೇಖ ಮಾಡಲಾಗಿತ್ತು.
10 ಮಾರ್ಗದ ಪೈಕಿ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆ. ಉಳಿದಂತೆ ಬೆಂಗಳೂರು-ಹೊಸಪೇಟೆ, ಬೆಂಗಳೂರು-ತಿರುಪತಿ, ಬೆಂಗಳೂರು-ಮುಧುರೈ, ಬೆಂಗಳೂರು-ಪುದುಚೇರಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಶಿವಮೊಗ್ಗ ಮತ್ತು ಬೀದರ್-ಹುಬ್ಬಳ್ಳಿ ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಹಾಗೆಯೇ ಇದೆ.
ಈ ಬಾರಿಯ ಬಜೆಟ್‌ನಲ್ಲಿ 300 ವಂದೇ ಭಾರತ್ ರೈಲುಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಕರ್ನಾಟಕದ ಬೇಡಿಕೆಯಲ್ಲಿ ಕನಿಷ್ಠ 3 ರೈಲುಗಳನ್ನಾದರೂ ಘೋಷಣೆ ಮಾಡಲಾಗುತ್ತದೆಯೇ? ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸದ್ಯಕ್ಕೆ ಇಲ್ಲದ ಕಾರಣ ಎಷ್ಟು ರೈಲು ನೀಡಲಾಗುತ್ತದೆ? ಕಾದು ನೋಡಬೇಕಿದೆ.
ಬೆಂಗಳೂರು ನಗರದಿಂದ ವಿವಿಧ ನಗರದಿಂದ ವಿವಿಧ ನಗರ ಸಂಪರ್ಕಿಸಲು ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಕ್ಕೆ ಸದ್ಯ ಒಂದೇ ರೈಲು ಸಂಚಾರ ನಡೆಸುತ್ತಿದೆ. ಆದ್ದರಿಂದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ ರೈಲು ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ ಒಟ್ಟು 75 ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುತ್ತೇವೆ ಎಂದು ಘೋಷಣೆ ಮಾಡಿತ್ತು. ಆದರೆ 60 ಕ್ಕೂ ಹೆಚ್ಚು ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಈಗ ವಂದೇ ಭಾರತ್ ರೈಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ರೈಲುಗಳನ್ನು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications