World Wushu Championship: ಬೆಳ್ಳಿ ಗೆದ್ದ ಬಿಎಸ್‌ಎಫ್ ಕಾನ್ಸ್‌ಟೇಬಲ್‌ಗೆ ಹೆಡ್ ಕಾನ್ಸ್‌ಟೇಬಲ್ ಬಡ್ತಿ
ನವದೆಹಲಿ, ಅಕ್ಟೋಬರ್ 24: ವಿಶ್ವ ವುಶು ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಿಎಸ್‌ಎಫ್‌ನ ಕಾನ್‌ಸ್ಟೆಬಲ್ ಶಿವಾನಿ ಅವರು ಇಂದು (ಅಕ್ಟೋಬರ್ 24) ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಬಿಎಸ್‌ಎಫ್ ಕ್ಯಾಂಪ್ ಚಾವ್ಲಾದಲ್ಲಿ ಬಿಎಸ್‌ಎಫ್‌ನ ಡಿಜಿ ದಲ್ಜಿತ್ ಸಿಂಗ್ ಚೌಧರಿ ಅವರು ರ‍್ಯಾಂಕ್ ಸಮಾರಂಭದ ನೇತೃತ್ವದ ವಹಿಸಿದ್ದರು.
ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಸೇವೆ ಸಲ್ಲಿಸಿದ ಕೇವಲ ಐದು ತಿಂಗಳೊಳಗೆ ಕಾನ್‌ಸ್ಟೆಬಲ್ ಶಿವಾನಿ ಈ ಬಡ್ತಿಯನ್ನು ಗಳಿಸುವ ಮೂಲಕ ಮಹತ್ವ ಸಾಧನೆ ಮಾಡಿದ್ದಾರೆ. ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ (ಡಿಒಪಿಟಿ) ಅಗತ್ಯ ಸಡಿಲಿಕೆ ಮತ್ತು ಅನುಮತಿಗಳನ್ನು ಸಹ ಪಡೆದು ಉನ್ನತ ಪಟ್ಟಕ್ಕೇರಿದ್ದಾರೆ.

ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಬಡ್ತಿ ಪಡೆದ ಕಾನ್‌ಸ್ಟೆಬಲ್ ಶಿವಾನಿ ಅವರು ಬ್ರೆಜಿಲ್‌ನಲ್ಲಿ ನಡೆದ 17 ನೇ ವಿಶ್ವ ವುಶು ಚಾಂಪಿಯನ್‌ಶಿಪ್ 2025 ರಲ್ಲಿ ಭಾರತ ಪ್ರತಿನಿಧಿಸಿದ್ದರು. ಅಲ್ಲಿ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಎಫ್‌ನ ಡಿಜಿ ದಲ್ಜಿತ್ ಸಿಂಗ್ ಚೌಧರಿ ಅವರು, ಹೆಡ್ ಕಾನ್‌ಸ್ಟೆಬಲ್ ಶಿವಾನಿ ಅವರನ್ನು ಅಭಿನಂದಿಸಿದರು. ಶಿವಾನಿ ಅವರ ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ಶ್ಲಾಘಿಸಿದರು. ಅವರ ರ‍್ಯಾಂಕ್ ಆಫ್ ಟೂರ್ ಬಡ್ತಿ ಇತರರಿಗೆ ಸ್ಪೂರ್ತಿಯಾಗಿದೆ ಎಂದು ಸಮಾರಂಭದಲ್ಲಿದ್ದ ಬಿಎಸ್‌ಎಫ್ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವರ್ಷ 2025 ಜುಲೈ ನಲ್ಲಿ ಬಿಎಸ್‌ಎಫ್ ಸೆಂಟ್ರಲ್ ವುಶು ತಂಡದ ಕಾನ್‌ಸ್ಟೆಬಲ್ ಅನುಜ್ ಅವರಿಗೆ ಏಪ್ರಿಲ್ 2025 ರಲ್ಲಿ ಚೀನಾದಲ್ಲಿ ಜರುಗಿದ್ದ 10ನೇ ಸಾಂಡಾ ವಿಶ್ವ ವುಶು ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಔಟ್-ಆಫ್-ಟರ್ನ್ ಬಡ್ತಿ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂದಿನ ರ‍್ಯಾಂಕ್ ಸಮಾರಂಭದಲ್ಲಿ ಹಿರಿಯ ಬಿಎಸ್‌ಎಫ್ ಅಧಿಕಾರಿಗಳು ಮತ್ತು ಬಿಎಸ್‌ಎಫ್‌ನ ಕ್ರೀಡಾ ಸಿಬ್ಬಂದಿಯ ಸಭೆಯಲ್ಲಿದ್ದರು.












Click it and Unblock the Notifications