"ಮೋದಿಗೆ ಈಗ ಉಪವಾಸ, ಕರ್ನಾಟಕ ಚುನಾವಣೆ ನಂತರ ಸನ್ಯಾಸ, ಮುಂದೆ ವನವಾಸ"

ನವದೆಹಲಿ, ಏಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ಬಿಜೆಪಿಗರು ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಉಪವಾಸವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ.
"ಉಪವಾಸದ ಸಮಯ ಮುಗಿದಿದೆ. ಕರ್ನಾಟಕ ಚುನಾವಣೆಯ ಸೋಲಿನೊಂದಿಗೆ ಸೀಟು ಬಿಟ್ಟು ಸನ್ಯಾಸ ತೆಗೆದುಕೊಳ್ಳುವ ಸಮಯ ಆರಂಭವಾಗಲಿದೆ. 2019ರಲ್ಲಿ ಇದು ವನವಾಸದಲ್ಲಿ ಅಂತ್ಯಗೊಳ್ಳಲಿದೆ," ಎಂದು ಅವರು ಕುಟುಕಿದ್ದಾರೆ.
ಉಪವಾಸ ಕೂತ ಶೋಭಾ ಕರಂದ್ಲಾಜೆಯಿಂದ ಕಾಂಗ್ರೆಸ್ ವಿರುದ್ದ ವಾಗ್ದಾಳಿ
"ನರೇಂದ್ರ ಮೋದಿ ವಿಮಾನದಲ್ಲಿ ಮುಂಜಾನೆಯ ಉಪಹಾರ ಸೇವಿಸಿದ್ದಾರೆ. ಉಪವಾಸದ ನಂತರ ಅಮಿತ್ ಶಾ ಊಟ ಮಾಡಿದ್ದಾರೆ. ಇದೊಂದು ಫೋಟೋಗೆ ಕುಳಿತ ಪ್ರಹಸನ. 2009-14ರ ನಡುವಿನ ಹಿಂದಿನ ಲೋಕಸಭೆಯ ಶೇಕಡಾ 66.88 ಸಮಯವನ್ನು ಇದೇ ಪಕ್ಷ ಹಾಳು ಮಾಡಿತ್ತು. ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಬಜೆಟ್ ಅಧಿವೇಶನದ 250 ಗಂಟೆಗಳನ್ನು ವ್ಯರ್ಥ ಮಾಡಿತ್ತು. ಗಣತಂತ್ರವನ್ನು ಅವಮಾನಿಸುತ್ತಿರುವುದಕ್ಕೆ ಮೋದಿ ಮತ್ತು ಬಿಜೆಪಿ ಕ್ಷಮಾಪಣೆ ಕೇಳಬೇಕು," ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಕರ್ನಾಟಕ ಸರಕಾರದ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಸುರ್ಜೇವಾಲಾ ಬೆಂಬಲಿಸಿದ್ದಾರೆ. ಇದೊಂದು ಐತಿಹಾಸಿಕವಾಗಿ ಸಾಬೀತಾದ ಮಹಾತ್ವಾಕಾಂಕ್ಷೆಯ ಬೇಡಿಕೆಯಾಗಿದ್ದು, ಬೇಡಿಕೆಯನ್ನು ಮನ್ನಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ತಂಡದ ನಾಯಕರು ಮತ್ತು ಆರಂಭಿಕ ಬ್ಯಾಟ್ಸ್ ಮನ್. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮೇ 12ರ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಲಿದೆ ಎಂದವರು ಹೇಳಿದ್ದಾರೆ.