ಮೂರು ದಿನದಲ್ಲಿ 4.75 ಕೋಟಿ ಮತದಾರರನ್ನು ತಲುಪಲಿರುವ ಬಿಜೆಪಿ!
ನವದೆಹಲಿ, ನವೆಂಬರ್ 03: ರಾಜಸ್ಥಾನದ ವಿಧಾನಸಭೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೂರು ದಿನಗಳಲ್ಲಿ 4.75 ಕೋಟಿ ಮತದಾರರನ್ನು ತಲುಪಲು ಯೋಜನೆ ರೂಪಿಸಿಕೊಂಡಿರುವ ಬಿಜೆಪಿ, 'ಭೂತ್ ಮಹಾಸಂಪರ್ಕ ಅಭಿಯಾನ' ಹಮ್ಮಿಕೊಂಡಿದೆ.
ಪಕ್ಷದ ಹಿರಿಯ ನಾಯಕರು, ಪಕ್ಷದ ಉಸ್ತುವಾರ ಹೊತ್ತವರು ಸೇರಿದಂತೆ ಎಲ್ಲಾ ಘಟಾನುಘಟಿ ನಾಯಕರು ಈ ಅಭಿಯಾನದಲ್ಲಿ ಭಾಗವಹಿಸಿ, ಜನರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ. ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ವಸುಂಧರಾ ರಾಜೆ, ಗೃಹಮಂತ್ರಿ ಗುಲಾಬ್ ಚಂದ್ರ ಕಟಾರಿಯಾ ಸೇರಿದಂತೆ ಗಣ್ಯರು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಮೂರು ದಿನದಲ್ಲಿ ನಾಲ್ಕೂ ಮುಕ್ಕಾಲು ಕೋಟಿ ಮತದಾರರು
ಮೂರೇ ಮೂರು ದಿನಗಳಲ್ಲಿ 4.75 ಕೋಟಿ ಮತದಾರರನ್ನು ತಲುಪಲು ನಿರ್ಧರಿಸುವ ಬಿಜೆಪಿ, ತನ್ನ ಬೇರೆ ಬೇರೆ ನಾಯಕರನ್ನು ವಿವಿಧ ಕ್ಷೇತ್ರಗಳಿಗೆ ಕಳಿಸಿ, ಪಕ್ಷದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರೂ ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.

ಅಭಿಯಾನಕ್ಕೆ ನಾಂದಿ ಹಾಡಿದ ರಾಜೆ
ಹಾಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಜಲ್ವಾಡ್ ದಿಂದ ಅಭಿಯಾನ ಆರಂಭಿಸಿದ್ದರೆ, ಗೃಹ ಮಂತ್ರಿ ಗುಲಾಬ್ ಚಂದ್ರ ಕಟಾರಿಯಾ ಉದಯಪುರದಿಂದ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಜೈಪುರದ ಗೋವಿಂದೇವ್ ದೇವಾಲಯದಿಂದ ಅಭಿಯಾನ ಆರಂಭಿಸಿದ್ದಾರೆ.

ಭಿತ್ತಿಪತ್ರ ಹಂಚುತ್ತಿರುವ ಬಿಜೆಪಿ
ರಾಜ್ಯದ 200 ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲೂ ಮೂರು ದಿನಗಳಲ್ಲಿ ಅಭಿಯಾನ ಮುಗಿಸಲಿರುವ ಬಿಜೆಪಿ, 'ನಾನು ಬಿಜೆಪಿಯೊಂದಿಗಿದ್ದೇನೆ' ಎಂಬ ಸ್ಟಿಕ್ಕರ್ ಗಳನ್ನು ಸಹ ಜನರಿಗೆ ನೀಡುತ್ತಿದೆ. ಜೊತೆಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮತ್ತು ನಾಲ್ಕೂ ಮುಕ್ಕಾಲು ವರ್ಷಗಳ ಸಾಧನೆಯನ್ನು ವಿವರಿಸುವ ಭಿತ್ತಿಪತ್ರಗಳನ್ನು ಹಂಚುತ್ತಿದೆ. ಇವೆಲ್ಲ ಬಿಜೆಪಿಗೆ ಎಷ್ಟರಮಟ್ಟಿಗೆ ಸಹಾಯಕವಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.

ರಾಜಸ್ಥಾನದಲ್ಲಿ ಚುನಾವಣೆ ಎಂದು?
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101.












Click it and Unblock the Notifications