ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಕಲಿ ಮದ್ಯದಿಂದ ಸಂಭವಿಸಿದ ಸಾವುಗಳು ಹೆಚ್ಚು: ತೇಜಸ್ವಿ ಯಾದವ್
ಪಾಟ್ನಾ, ಡಿಸೆಂಬರ್ 15: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಕಲಿ ಮದ್ಯದಿಂದ ಸಂಭವಿಸಿದ ಸಾವುಗಳು ಹೆಚ್ಚು ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಹುಚ್ ದುರಂತದ ಸಂಬಂಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಅವರು ಮಾತನಾಡಿದ್ದಾರೆ.
ಇದು ಬಿಜೆಪಿಯವರು ನಡೆಸುತ್ತಿರುವ ದೊಡ್ಡ ನಾಟಕ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯಾದವ್, ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಬಿಜೆಪಿಗೆ ಎಲ್ಲಾ ಅವಕಾಶಗಳಿವೆ. ಹೀಗಿರುವಾಗ, ಪ್ರಶ್ನೋತ್ತರ ವೇಳೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿ ನಾಟಕೀಯವಾಗಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
ಹಿಂದೆಯೂ ನಕಲಿ ಮದ್ಯ ಸೇವನೆಯಿಂದ ಸಾವುಗಳು ಸಂಭವಿಸಿವೆ. ಗೋಪಾಲ್‌ಗಂಜ್‌ನಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸಿದಾಗಲೂ ಅವರೇಕೆ ಸುಮ್ಮನಿದ್ದರು ಎಂದು ಯಾದವ್ ಪ್ರಶ್ನಿಸಿದ್ದಾರೆ.

ಬಿಜೆಪಿ ಸದಸ್ಯರು ಕೇವಲ ತಪ್ಪು ಮಾಹಿತಿಗಳನ್ನು ಹರಡುವುದರಲ್ಲಿ ನಿರತರಾಗಿದ್ದಾರೆ. ಅವರು ಸತ್ಯಗಳನ್ನು ಪರಿಶೀಲಿಸುವುದಿಲ್ಲ ಎಂದು ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ನಕಲಿ ಮದ್ಯ ಕುಡಿದ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ತಲುಪಿದೆ. ನಕಲಿ ಮದ್ಯ ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ನಿರಾಕರಿಸಿದ್ದಾರೆ.
2016ರಿಂದ ರಾಜ್ಯದಲ್ಲಿ ಮದ್ಯ ನಿಷೇಧವಿದೆ. ಹೀಗಿರುವಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೆಡಿಯು-ಆರ್‌ಜೆಡಿ ಸರ್ಕಾರವು ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಇದರಲ್ಲಿ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್, 'ಮದ್ಯ ಕುಡಿದವರು ನಿಸ್ಸಂಶಯವಾಗಿ ಸಾಯುತ್ತಾರೆ. ಉದಾಹರಣೆ ನಿಮ್ಮ ಕಣ್ಣ ಮುಂದಿದೆ' ಎಂದು ಹೇಳಿದ್ದಾರೆ.












Click it and Unblock the Notifications