ಅಂದು ದೇವೇಗೌಡ್ರು, ಇಂದು ಶರದ್ ಪವಾರ್: ಬಕ್ರಾ ಆಗಿದ್ದು ಯಾರು?
Recommended Video
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಯಾವುದಕ್ಕೂ ಇರಲಿ ಎಂದು ಒಂದೈದು ಜೊತೆ ಜುಬ್ಬಾ ಉದ್ಧವ್ ಠಾಕ್ರೆ ಆರ್ಡರ್ ಕೊಟ್ಟಿದ್ದರೋ ಏನೋ? ಜುಬ್ಬಾ ಬರುವಷ್ಟರಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಆಗಿದ್ದೇ ಬೇರೆ..
ಬಿಜೆಪಿ - ಶಿವಸೇನೆ ನಡುವಿನ 50:50 ಅಧಿಕಾರ ಹಂಚಿಕೆ ಬಗೆಹರಿಯದೇ ಇದ್ದಾಗ, ಎನ್ಸಿಪಿಯ ಒತ್ತಡಕ್ಕಾಗಿ, ಸೋನಿಯಾ ಗಾಂಧಿ ಎಂಟ್ರಿ ಕೊಟ್ಟರು. ಆದರೆ, ಹಿಂಬಾಗಿಲಿನಿಂದ ನಡೆಯುತ್ತಿದ್ದ ಗೌಪ್ಯ ರಾಜಕೀಯವನ್ನು ಅರಿಯದೇ ಹೋದರೂ, ಒಂದು ಹಂತಕ್ಕೆ ಅಂತರ ಕಾಯ್ದುಕೊಳ್ಳುವಲ್ಲಿ ಸೋನಿಯಾ ಯಶಸ್ವಿಯಾಗಿದ್ದರು.
ಶಿವಸೇನೆಯ ಇಂದಿನ ಪರಿಸ್ಥಿತಿಯನ್ನು ನೋಡಿ, ದೆಹಲಿಯಲ್ಲಿ ಕೂತು ಅಮಿತ್ ಶಾ ಅದೆಷ್ಟು ಮುಸಿಮುಸಿ ನಗುತ್ತಿದ್ದಾರೋ? "ಮಹಾರಾಷ್ಟ್ರದ ತಾಜಾ ಬೆಳವಣಿಗೆ ನನ್ನ ಗಮನಕ್ಕೆ ಬರದೇ ನಡೆದಿದೆ" ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳುತ್ತಿದ್ದಾರೆ.
ಅದು ನಿಜವಾಗಿದ್ದೇ ಆದಲ್ಲಿ, ಇಂದಿನ ಶರದ್ ಪವಾರ್ ಪರಿಸ್ಥಿತಿಗೂ, ಅಂದಿನ ಜೆಡಿಎಸ್ ವರಿಷ್ಠ ದೇವೇಗೌಡ್ರ ಪರಿಸ್ಥಿತಿಗೂ ಒಂದಕ್ಕೊಂದು ತಾಳೆಯಾಗುತ್ತದೆ. ಎರಡೂ ಕಡೆ, ಹಿನ್ನಡೆ ಅನುಭವಿಸಿದ್ದು ಮಾತ್ರ ಕಾಂಗ್ರೆಸ್.

ಕುಮಾರಸ್ವಾಮಿ ಸಿಎಂ ಆದರು, ಯಡಿಯೂರಪ್ಪ ಡಿಸಿಎಂ ಆದರು
2006 ಆದಿಯಲ್ಲಿ ಕಂಡು ಕೇಳರಿಯದ ರಾಜಕೀಯ ವಿದ್ಯಮಾನಗಳಿಗೆ ಕರ್ನಾಟಕ ಸಾಕ್ಷಿಯಾಗಿತ್ತು. ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಜೆಡಿಎಸ್ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದಿತ್ತು. ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತು. 04.02.2006ರಲ್ಲಿ 20:20 ಅಧಿಕಾರ ಹಂಚಿಕೆಯಡಿ ಕುಮಾರಸ್ವಾಮಿ ಸಿಎಂ ಆದರು, ಯಡಿಯೂರಪ್ಪ ಡಿಸಿಎಂ ಆದರು.

ದೇಶಾದ್ಯಂತ ದೇವೇಗೌಡ್ರ ವಿರುದ್ದ ಆಕ್ರೋಶ
ಜಾತ್ಯಾತೀತ ಎನ್ನುತ್ತಿದ್ದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ದೇಶಾದ್ಯಂತ ದೇವೇಗೌಡ್ರ ವಿರುದ್ದ ಆಕ್ರೋಶ ಕೇಳಲಾರಂಭಿಸಿತು. ಲಾಲೂ ಪ್ರಸಾದ್, ಮಾಯಾವತಿ, ಮುಲಾಯಂ ಸಿಂಗ್ ಆದಿಯಾಗಿ, ಎಲ್ಲರೂ ಗೌಡ್ರ ವಿರುದ್ದ ಮುಗಿಬಿದ್ದರು. ನನ್ನ ಮಗ ನನ್ನನ್ನು ಕೇಳದೇ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿದ್ದಾನೆ ಎಂದು ಗೌಡ್ರು ಸಾರಿಸಾರಿ ಹೇಳಿದರು.

ಅಪ್ಪ-ಮಗನ ನಡುವೆ ಮೇಲ್ನೋಟಕ್ಕೆ ಮಾತುಕತೆಯೇ ನಡೆದಿರಲಿಲ್ಲ
ಕುಮಾರಸ್ವಾಮಿ ಅಂದು ಅಧಿಕಾರದಲ್ಲಿದ್ದಷ್ಟು ದಿನ ಅಪ್ಪ-ಮಗನ ನಡುವೆ ಮೇಲ್ನೋಟಕ್ಕೆ ಮಾತುಕತೆಯೇ ನಡೆದಿರಲಿಲ್ಲ. ನನ್ನ ವಿರುದ್ದವಾಗಿ ಮಗ ನಡೆದುಕೊಂಡಿದ್ದಾನೆ ಎಂದು ಒಂದು ಮಟ್ಟಿಗೆ ರಾಜ್ಯಕ್ಕೆ ಮತ್ತು ದೇಶದ ಪ್ರಮುಖ ಮುಖಂಡರಿಗೆ ಮನವರಿಕೆ ಮಾಡಲು ಗೌಡ್ರು ಯಶಸ್ವಿಯಾಗಿದ್ದರು.

ಅಂದು ಏನು ಕರ್ನಾಟಕದಲ್ಲಿ ಪವಿತ್ರವೋ
ಅಂದು ಏನು ಕರ್ನಾಟಕದಲ್ಲಿ ಪವಿತ್ರವೋ, ಅಪವಿತ್ರವೋ ಮೈತ್ರಿಯಾಗಿತ್ತೋ, ಅದೇ ಬೆಳವಣಿಗೆಗಳಿಗೆ ಮುಂಬೈ ಇಂದು ಸಾಕ್ಷಿಯಾಗಿದೆ. ತಮ್ಮ ಸೈದ್ದಾಂತಿಕ ನಿಲುವಿಗೆ ಯಾವುದಕ್ಕೂ ಹೊಂದದ ಎನ್ಸಿಪಿ ಜೊತೆ, ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅಂದು ಗೌಡ್ರು ಹೇಳಿದ್ದನ್ನು, ಈಗ ಶರದ್ ಪವಾರ್ ಹೇಳುತ್ತಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ದೇವೇಂದ್ರ ಫಡ್ನವೀಸ್ ಸಿಎಂ ಆಗಿ, ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹಿನ್ನಡೆ ಅನುಭವಿಸಿದ್ದಂತೂ ಕಾಂಗ್ರೆಸ್
ಅಂದಾಗಲಿ, ಇಂದಾಗಲಿ, ಇಂತಹ ದೊಡ್ಡ ರಾಜಕೀಯ ಬೆಳವಣಿಗೆಗಳು ಸೀಸನ್ ಪೊಲಿಟಿಸಿಯನ್ಸ್ ಎಂದೇ ಕರೆಯಲ್ಪಡುವ ದೇವೇಗೌಡರಿಗಾಗಲಿ ಅಥವಾ ಶರದ್ ಪವಾರ್ ಅವರಿಗೆ ತಿಳಿಯದೇ ನಡೆಯಲು ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ. ಒಟ್ಟಿನಲ್ಲಿ, ಎರಡೂ ವಿದ್ಯಮಾನಗಳಲ್ಲಿ ಹಿನ್ನಡೆ ಅನುಭವಿಸಿದ್ದಂತೂ ಕಾಂಗ್ರೆಸ್ ಎನ್ನುವುದು ಅತ್ಯಂತ ಸ್ಪಷ್ಟ.












Click it and Unblock the Notifications