
ನೋಟಿನಲ್ಲಿ ಮೋದಿ ಫೋಟೊ ಮುದ್ರಿಸಿ ಟ್ವೀಟ್ ಮಾಡಿದ ಬಿಜೆಪಿ ಶಾಸಕ
ಮುಂಬೈ, ಅಕ್ಟೋಬರ್ 27: ಕರೆನ್ಸಿ ನೋಟಿನಲ್ಲಿ ಗಣಪತಿ ಹಾಗೂ ಲಕ್ಷ್ಮಿ ದೇವರುಗಳ ಫೋಟೊಗಳನ್ನು ಮುದ್ರಿಸಬೇಕೆಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಕೇಜ್ರಿವಾಲ್ ಅವರು ಹಿಂದೂ ಧರ್ಮದ ಬಗ್ಗೆ ದ್ವಂದ್ವ ನಿಲುವು ಹೊಂದಿದ್ದಾರೆ. ಅವರು ಹಿಂದೂ ವಿರೋಧಿ ಎಂದು ಬಿಜೆಪಿ ಹೇಳಿದೆ. ಕರೆನ್ಸಿ ನೋಟಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೊವನ್ನು ಮುದ್ರಿಸುವುದು ಏಕೆ ಬೇಡ ಎಂದು ಕಾಂಗ್ರೆಸ್ ಕೇಳಿದೆ.
ಆದರೆ, ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಬೇರೆಯದೇ ವಾದವನ್ನು ಮುಂದಿಟ್ಟಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್, ಶಿವಾಜಿ, ವಿನಾಯಕ ದಾಮೋದರ್ ಸಾವರ್ಕರ್ ಮತ್ತು ನರೇಂದ್ರ ಮೋದಿ ಅವರ ಚಿತ್ರಗಳನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಒತ್ತಾಯಿಸಿದ್ದಾರೆ.
अखंड भारत.. नया भारत.. महान भारत..
— Ram Kadam (@ramkadam) October 27, 2022
जय श्रीराम .. जय मातादी ! pic.twitter.com/OPrNRu2psl
ಈ ನಾಲ್ವರು ನಾಯಕರ ಚಿತ್ರಗಳನ್ನು ಮುದ್ರಿಸಿರುವ ನೋಟುಗಳ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಅವರ ಚಿತ್ರಗಳು ದೇಶದ ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡುತ್ತವೆ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ' ಎಂದು ಕದಮ್ ತಿಳಿಸಿದ್ದಾರೆ.

ಗುಜರಾತ್ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ನೋಟಿನ ವಿವಾದ ಕಾವು ಪಡೆದಿದೆ. ಗುಜರಾತ್‌ನ ಅಭಿವೃದ್ಧಿ ವಿಚಾರಗಳನ್ನು ಬಿಟ್ಟು, ಭಾವನಾತ್ಮಕ ವಿಚಾರಗಳನ್ನು ರಾಜಕೀಯ ನಾಯಕರು ಮುನ್ನೆಲೆಗೆ ತರುತ್ತಿದ್ದಾರೆ. ಹಿಂದುತ್ವದ ಪ್ರಯೋಗ ಶಾಲೆಯಂತಿರುವ ಗುಜರಾತ್‌ನಲ್ಲಿ ಇಂತಹ ವಿಚಾರಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತವೆಂದೂ ರಾಜಕಾರಣಿಗಳ ಲೆಕ್ಕಾಚಾರವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್ ಹಳ್ಳಿಗಳಿಗೆ ಹೋಗಿ ಕೆಳ ಹಂತರ ಪ್ರಚಾರದಲ್ಲಿ ತೊಡಗಿಕೊಂಡಿದೆ. ನಗರ ಪ್ರದೇಶದ ವೋಟುಗಳ ಮೇಲೆ ಕಣ್ಣಿಟ್ಟಿರುವ ಎಎಪಿ ಹಾಗೂ ಬಿಜೆಪಿ ಭಾವನಾತ್ಮಕ ತಂತ್ರಗಳನ್ನು ಬಳಸಲು ಮುಂದಾಗಿವೆ.