ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗರ್ವಭಂಗ: ಅಖಿಲೇಶ್ ವ್ಯಂಗ್ಯ
ಲಕ್ನೊ, ಡಿಸೆಂಬರ್ 19: "ಗುಜರಾತಿನಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿದೆ. ಜನರಿಗೆ ಬಿಜೆಪಿಯ ಮೇಲಿನ ಅಸಮಾಧಾನ ಇನ್ನೂ ಸ್ವಲ್ಪ ಹೆಚ್ಚಾಗಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು" ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಟ್ಟ ಪಡಿಪಾಟಲಿನ ಕುರಿತು ವ್ಯಂಗ್ಯ ದಾಟಿಯಲ್ಲಿ ಮಾತನಾಡಿದರು.

ಕೇಸರಿ ಪಕ್ಷ ಯಾವಾಗಲೂ ಅಭಿವೃದ್ಧಿಯ ಬಗ್ಗೆ ಮಾತನಾಡಬಹುದಷ್ಟೆ. ಆದರೆ ಅವರ ಚುನಾವಣಾ ಪ್ರಚಾರದಲ್ಲಿ ಯಾವಾಗಲೂ ಮುಖ್ಯ ಗಮನ ಜಾತಿ ಮತ್ತು ಮತದ ಮೇಲೇ ಇರುತ್ತದೆ. ಗುಜರಾತಿನ ಜನರಿಗೆ ಬಿಜೆಪಿ ಆಡಳಿತದ ಕುರಿತು ಅಸಮಾಧಾನವಿದೆ. ಈ ಅಸಮಾಧಾನವೇ ಮತವಾಗಿ ಬದಲಾಗಿದ್ದರೆ ಬಿಜೆಪಿಯ ಪರಿಸ್ಥಿತಿ ಕಷ್ಟವಿತ್ತು. ಬಿಜೆಪಿ ಗೆದ್ದಿದ್ದರೂ ಅದರ ಗರ್ವಭಂಗವಾಗಿದೆ ಎಂದು ಅವರು ಹೇಳಿದ್ದಾರೆ.
ಡಿ.18 ರಂದು ಹೊರಬಿದ್ದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99(182) ಸ್ಥಾನ ಪಡೆದು ಬಹುಮತ ಪಡೆದಿದ್ದರೂ, ಕಾಂಗ್ರೆಸ್ 80 ಸ್ಥಾನ ಪಡೆದು ಬಿಜೆಪಿಗೆ ಸಮಬಲದ ಹೋರಾಟ ನೀಡಿತ್ತು. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ 16 ರಷ್ಟು ಸೀಟುಗಳನ್ನು ಕಳೆದುಕೊಂಡಿರುವುದು ಗಮನಾರ್ಹ.












Click it and Unblock the Notifications