Breaking News: ಹರ್ಯಾಣ ಚುನಾವಣೆ, ಕೈ ತಪ್ಪಿದ ಟಿಕೆಟ್, ಬಿಜೆಪಿ ತೊರೆದ ಮತ್ತೊಬ್ಬ ನಾಯಕ
ನವದೆಹಲಿ, ಸೆಪ್ಟೆಂಬರ್ 07: ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಅಸಮಾಧಾನವನ್ನು ಎದುರಿಸುತ್ತಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಟಿಕೆಟ್ ಕೈತಪ್ಪಿದ ಮೂವರು ನಾಯಕರು ಪಕ್ಷ ತೊರೆದಿದ್ದಾರೆ. ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಫಲಿತಾಂಶ ಅಕ್ಟೋಬರ್ 8ರಂದು ಘೋಷಣೆಯಾಗಲಿದೆ.
ಜಿಂದ್ ಜಿಲ್ಲೆಯ ಸಫಿಡಾನ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಚಿವ ಬಚ್ಚನ್ ಸಿಂಗ್ ಆರ್ಯಾ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೂರು ದಿನದಲ್ಲಿ ಮೂರು ನಾಯಕರು ಪಕ್ಷವನ್ನು ತೊರೆದಿದ್ದು, ಚುನಾವಣೆ ಹೊತ್ತಿನಲ್ಲಿ ಹರ್ಯಾಣ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ.

ಬಿಜೆಪಿ ಬಚ್ಚನ್ ಸಿಂಗ್ ಆರ್ಯಾ ಬದಲು ಕ್ಷೇತ್ರದಿಂದ ಜೆಜೆಪಿ ಪಕ್ಷ ಹಾಲಿ ಶಾಸಕ ರಾಮ್‌ಕುಮಾರ್ ಗೌತಮ್ ಕಣಕ್ಕಿಳಿಸಲು ತೀರ್ಮಾನಿಸಿ, ಅವರಿಗೆ ಟಿಕೆಟ್ ನೀಡಿದೆ. 2109ರ ಚುನಾವಣೆಯಲ್ಲಿ ಸೋತು, 2024ರ ಚುನಾವಣೆಗೆ ತಯಾರಿ ನಡೆಸಿದ್ದ ಬಚ್ಚನ್ ಸಿಂಗ್ ಆರ್ಯಾಗೆ ಟಿಕೆಟ್ ಕೈತಪ್ಪಿದ್ದು, ಅವರು ಪಕ್ಷ ತೊರೆದಿದ್ದಾರೆ.
ಮೂವರು ನಾಯಕರ ರಾಜೀನಾಮೆ: 2109ರ ಚುನಾವಣೆಯಲ್ಲಿ ಬಚ್ಚನ್ ಸಿಂಗ್ ಆರ್ಯಾ ಕೇವಲ 3 ಸಾವಿರ ಮತಗಳಲ್ಲಿ ಸಫಿಡಾನ್ ಕ್ಷೇತ್ರದಲ್ಲಿ ಸೋತಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಆದರೆ ಪಕ್ಷದ ಮೊದಲ ಪಟ್ಟಿಯಲ್ಲಿ ಬಚ್ಚನ್ ಸಿಂಗ್ ಆರ್ಯಾಗೆ ಟಿಕೆಟ್ ಕೈ ತಪ್ಪಿದೆ. ಆದ್ದರಿಂದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 6ರಂದು ಹಾಲಿ ಶಾಸಕ ಲಕ್ಷ್ಮೀ ನಾಪ, ಸೆಪ್ಟೆಂಬರ್ 5ರಂದು ಸಚಿವ ಕರಣ್ ಕಾಂಬೋಜ್ ಸಹ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಮತ್ತೊಬ್ಬ ನಾಯಕ, ಸಚಿವ ಭಿಷ್ಮೇಂದ್ರ ಸಿಂಗ್‌ಗೆ ಸಹ ಟಿಕೆಟ್ ಸಿಕ್ಕಿಲ್ಲ, ಅವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷ ತೊರೆಯುವ ಸೂಚನೆಯನ್ನು ನೀಡಿದ್ದಾರೆ.
ಬಿಜೆಪಿ ಪಟ್ಟಿ ಬಿಡುಗಡೆ ಬಳಿಕ ಕಾರ್ಯಕ್ರಮವೊಂದರಲ್ಲಿ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜೊತೆ ಭಿಷ್ಮೇಂದ್ರ ಸಿಂಗ್ ವೇದಿಕೆ ಹಂಚಿಕೊಂಡಿದ್ದರು. ಆದರೆ ಮುಖ್ಯಮಂತ್ರಿಗಳಿಗೆ ಹಸ್ತಲಾಘವ ಮಾಡಲು ಸಹ ಅವರು ನಿರಾಕರಿಸಿರುವ ವಿಡಿಯೋ ವೈರಲ್ ಆಗಿತ್ತು, ಅಸಧಾನ ಇರುವುದು ಬಹಿರಂಗವಾಗಿತ್ತು.
ಇಂಡ್ರಿ ಮತ್ತು ರಾದೌರ್ ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾನು ತಯಾರಿ ಮಾಡಿಕೊಂಡಿದ್ದೇನೆ. ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಹೇಗೆ? ಎಂದು ಭಿಷ್ಮೇಂದ್ರ ಸಿಂಗ್ ಪ್ರಶ್ನೆ ಮಾಡಿದ್ದರು. ಪಕ್ಷದ ನಾಯಕರನ್ನು ನಿಂದಿಸುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್ 3ರಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು. ಸೆಪ್ಟೆಂಬರ್ 4ರಂದು ಹರ್ಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿತ್ತು. ಪಟ್ಟಿ ರಾಜ್ಯ ರಾಜಕೀಯದಲ್ಲಿ ಹಲವು ಅಚ್ಚರಿಗೆ ಕಾರಣವಾಗಿದೆ. ಪಟ್ಟಿಯಲ್ಲಿ ಪ್ರಸ್ತುತ ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಈ ಬಾರಿ ಲಾಡ್ವಾದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.












Click it and Unblock the Notifications