Haryana Assembly Election 2024: 'ಸಿಎಂ ಸ್ಥಾನ ನನಗೆ ಬೇಕು' ಎಂದ ಬಿಜೆಪಿ ನಾಯಕ
ಹರಿಯಾಣ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ವಾರಗಳಷ್ಟೇ ಬಾಕಿ ಇದೆ. ಉಭಯ ಪಕ್ಷಗಳು ಈಗಾಗಲೇ ರಾಜ್ಯದಲ್ಲಿ ಭರ್ಜರಿ ಪ್ರಚಾರಕ್ಕೆ ಇಳಿದಿವೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕುರುಕ್ಷೇತ್ರದಲ್ಲಿ ಚುನಾವಣಾ ಭಾಷಣ ಮಾಡಿ ಅಬ್ಬರಿಸಿದ್ದರು. ಇದರ ನಡುವೆ ಚುನಾವಣೆಯ ಗೆಲುವಿಗೂ ಮುನ್ನವೇ ಹರಿಯಾಣ ಬಿಜೆಪಿ ನಾಯಕರಲ್ಲಿ ಸಿಎಂ ಕುರ್ಚಿ ಕಿತ್ತಾಟ ಶುರುವಾದಂತಿದೆ.
ಒಂದು ವೇಳೆ ಹರಿಯಾಣದಲ್ಲಿ ಮತ್ತೊಮ್ಮೆ ಬಿಜೆಪಿಯೇ ಗೆಲುವು ಸಾಧಿಸಿದರೆ ನಯಾಬ್ ಸಿಂಗ್ ಸೈನಿ ಅವರೇ ಮತ್ತೆ ಸಿಎಂ ಆಗಲಿದ್ದಾರೆ ಎಂದು ಪಕ್ಷವು ಈಗಾಗಲೇ ಘೋಷಿಸಿದೆ. ಇದರ ನಡುವೆ ಅಲ್ಲಿ ಸಿಎಂ ಸ್ಥಾನಕ್ಕೆ ಮತ್ತೊಬ್ಬ ಬಿಜೆಪಿ ನಾಯಕ ಬೇಡಿಕೆ ಇಟ್ಟಿದ್ದು, ಹಿರಿಯನಾಗಿರುವ ನನಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಿಜೆಪಿ ಶಾಸಕ ಅನಿಲ್ ವಿಜ್ ಡಿಮ್ಯಾಂಡ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿಜ್, ನಾನು ಇಲ್ಲಿವರೆಗೆ ಬಿಜೆಪಿ ಪಕ್ಷದಿಂದ ಏನನ್ನೂ ಅಪೇಕ್ಷಿಸಿರಲಿಲ್ಲ. ಹರಿಯಾಣದ ಜನ ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಅಂಬಾಲದ ಜನರೆಲ್ಲ ನನ್ನನ್ನು ಹಿರಿಯ ಕರೆಯುತ್ತಾರೆ. ನೀವು ಏಕೆ ಇನ್ನೂ ಸಿಎಂ ಆಗಲಿಲ್ಲ ಎಂದು ಕೇಳುತ್ತಾರೆ. ಜನರ ಇಚ್ಛೆಯಂತೆ ಹಾಗೂ ಪಕ್ಷದಲ್ಲಿ ಹಿರಿಯನಾಗಿರುವ ಕಾರಣಕ್ಕೆ ನಾನು ಈ ಬಾರಿ ಸಿಎಂ ಆಗಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ನಾನು ಹಕ್ಕು ಮಂಡಿಸುತ್ತೇನೆ ಎಂದಿದ್ದಾರೆ.
ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆಯೋ ಇಲ್ಲವೋ. ಅದು ಅವರಿಗೆ ಬಿಟ್ಟದ್ದು. ಆದರೆ ಅವರು ನನ್ನನ್ನು ಮುಖ್ಯಮಂತ್ರಿ ಮಾಡಿದರೆ, ನಾನು ಹರಿಯಾಣದ 'ತಕ್ದೀರ್ ಮತ್ತು ತಸ್ವೀರ್'ಅನ್ನು (ಹಣೆಬರಹ ಮತ್ತು ಮುಖ) ಬದಲಾಯಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಬಿಜೆಪಿ ಈ ಹಿಂದೆ 2014ರಲ್ಲಿ ಮೊದಲ ಬಾರಿಗೆ ತನ್ನ ಸ್ವಂತ ಬಲದಲ್ಲಿ ಹರಿಯಾಣದಲ್ಲಿ ಸರ್ಕಾರ ರಚಿಸಿತ್ತು. ಆಗ ಇದೇ ವಿಜ್ ಸೇರಿದಂತೆ ಅನೇಕರು ಬಿಜೆಪಿ ಪ್ರಮುಖ ನಾಯಕರು ಸಿಎಂ ರೇಸ್‌ನಲ್ಲಿದ್ದರು. ಆದರೆ ಆಗ ಬಿಜೆಪಿ ಹೈಕಮಾಂಡ್ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಘೋಷಿಸಿತು. ಇದಾದ ನಂತರ 2019ರಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದಲ್ಲೂ ಖಟ್ಟರ್ ಅವರೇ ಸಿಎಂ ಆಗಿದ್ದರು.
ಈ ವರ್ಷದ ಆರಂಭದಲ್ಲಿ ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಸೈನಿ ಅವರನ್ನು ಹೊಸ ಸಿಎಂ ಆಗಿ ಘೋಷಿಸಲಾಯಿತು. ಸದ್ಯ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಲೆಕ್ಕಾಚಾರದಲ್ಲಿದೆ ಬಿಜೆಪಿ. ಇದರ ನಡುವೆಯೇ ಸಿಎಂ ಕುರ್ಚಿ ಜಗಳ ಶುರುವಾಗಿರುವುದು ಪಕ್ಷದಲ್ಲಿನ ಭಿನ್ನಮತಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 5ರಂದು ಹರಿಯಾಣದಲ್ಲಿ ಎಲೆಕ್ಷನ್ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಕೂಡ ಬಿಜೆಪಿ ಹಾಗೂ ಇತರೆ ಪಕ್ಷಗಳನ್ನು ಕಟ್ಟಿಹಾಕಲು ಪ್ರತಿತಂತ್ರಗಳನ್ನು ರೂಪಿಸಿದ್ದು, ಈ ಬಾರಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಕೂಡ ಕಣಕ್ಕಿಳಿಸಿದೆ. ನಿನ್ನೆ ಕಾಂಗ್ರೆಸ್ ವಿರುದ್ಧ ಹರಿಯಾಣದಲ್ಲಿ ಗುಡುಗಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸಿರುವ ಜನರು ಸದ್ಯ ಪಶ್ಚಾತಾಪ ಪಡುತ್ತಿದ್ದಾರೆ. ಕಾಂಗ್ರೆಸ್‌ನ ಸುಳ್ಳುಗಳು ಕರ್ನಾಟಕ, ತೆಲಂಗಾಣ ರಾಜ್ಯಗಳನ್ನೂ ಬಿಟ್ಟಿಲ್ಲ. ಕರ್ನಾಟಕದಲ್ಲಿ ಅವ್ಯವಸ್ಥೆ ಹೇಗಿದೆ ಎಂಬುದನ್ನು ನೀವೆಲ್ಲ ನೋಡುತ್ತಿದ್ದೀರಿ. ಭ್ರಷ್ಟಾಚಾರ ಮಿತಿಮೀರಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ ಎಂದು ದೂರಿದ್ದರು.












Click it and Unblock the Notifications