ಐಶ್ವರ್ಯಾ ರೈ ವಿರುದ್ಧ ರಾಹುಲ್ ಗಾಂಧಿ ಟೀಕೆ: ಕನ್ನಡಿಗರಿಗೆ ಮಾಡಿದ ಅವಮಾನ ಎಂದ ಬಿಜೆಪಿ!
ಬೆಂಗಳೂರು, ಫೆಬ್ರವರಿ.27: 2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿವೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ರಾಹುಲ್ ಗಾಂಧಿ ಇಷ್ಟು ಮಾತನಾಡಿದರೂ, ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮತ್ತು ಸಮಾಜವಾದಿ ಪಕ್ಷ ಏಕೆ ಮೌನವಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಕನ್ನಡತಿ ಐಶ್ವರ್ಯಾ ರೈಗೆ ಪದೇ ಪದೇ ಅವಮಾನ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವಿನ ಬಗ್ಗೆ ಕರ್ನಾಟಕ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಸದ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಹೆಸರನ್ನು ತೆಗೆದುಕೊಂಡು ಮಾಧ್ಯಮಗಳು ಏನು ತೋರಿಸುತ್ತವೆ ಎಂಬುದರ ಕುರಿತು ಮಾತನಾಡಿದ್ದರು. ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ನಾಲ್ಕು ಬಾರಿ ಕರಾವಳಿ ಬೆಡಗಿ, ನಟಿ ಐಶ್ವರ್ಯಾ ರೈ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
ರಾಮಮಂದಿರದ ಸಂದರ್ಭದಲ್ಲಿ, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಕೈಗಾರಿಕೋದ್ಯಮಿಗಳಾದ ಅದಾನಿ, ಅಂಬಾನಿ, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಉಪಸ್ಥಿತರಿದ್ದರು ಆದರೆ ಯಾವುದೇ ಬುಡಕಟ್ಟು ಸಮುದಾಯದ ಮುಖ ಇರಲಿಲ್ಲ, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಇರಲಿಲ್ಲ. ಇದು ಅವರ ಹಿಂದೂಸ್ಥಾನವಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಮತ್ತೊಂದು ಸಂದರ್ಭದಲ್ಲಿ ಮಾಧ್ಯಮಗಳ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, 'ಟೆಲಿವಿಷನ್ ಚಾನೆಲ್‌ಗಳು ಕೇವಲ ಐಶ್ವರ್ಯಾ ರೈ ನೃತ್ಯವನ್ನು ತೋರಿಸುತ್ತವೆ. ಅವರು ಬಡವರ ಬಗ್ಗೆ ಏನನ್ನೂ ತೋರಿಸುವುದಿಲ್ಲ. ಅವರು ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಅವರನ್ನು 24 ಗಂಟೆ ತೋರಿಸುತ್ತಾರೆ" ಎಂದು ಕಿಡಿಕಾರಿದ್ದರು. ಆದರೆ, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಇರಲಿಲ್ಲ.

ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಕಿಡಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, 'ತೃಣಮೂಲದ ಷಹಜಹಾನ್‌ನಿಂದ ಮಹಿಳೆಯರಿಗೆ ಹಿಂಸೆ ಮತ್ತು ಕಿರುಕುಳ ನೀಡಿದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಲಿಲ್ಲ. ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲದ ಐಶ್ವರ್ಯಾ ರೈ ಬಚ್ಚನ್ ಮೇಲೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಏಕೆ ಮೌನವಾಗಿದ್ದಾರೆ..? ಅವರಿಗೂ ಮುಜುಗರವಾಗಿದೆಯೇ..? ಸಮಾಜವಾದಿ ಪಕ್ಷ ತಮ್ಮ ಸ್ವಂತ ಸಂಸದರ ಕುಟುಂಬದ ಮೇಲಿನ ಈ ಕಾಮೆಂಟ್‌ಗಳ ವಿರುದ್ಧ ಏಕೆ ಏನನ್ನೂ ಹೇಳುತ್ತಿಲ್ಲ" ಎಂದು ಪ್ರಶ್ನಿಸಿದ್ದರು.
ಇನ್ನು, ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದೆ. "ನಮಸ್ಕಾರ ಶ್ರೀಸಿದ್ದರಾಮಯ್ಯನವರೇ, ನಿಮ್ಮ ಬಾಸ್ ಕನ್ನಡಿಗರನ್ನು ಅವಮಾನಿಸುವುದನ್ನು ಮುಂದುವರೆಸಿರುವಾಗ ನೀವು ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುವಿರಾ? ಅಂತಹ ಅಗೌರವದ ವಿರುದ್ಧ ಮಾತನಾಡುತ್ತೀರಾ ಅಥವಾ ನಿಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ?" ಎಂದು ಮುಖ್ಯಮಂತ್ರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications