‘ಕೇಸರಿ ಭಯೋತ್ಪಾದನೆ' ಹೇಳಿಕೆ, ರಾಹುಲ್‌ಗೆ ಹಲವು ಪ್ರಶ್ನೆ ಕೇಳಿದ ಬಿಜೆಪಿ!
ನವದೆಹಲಿ, ಏಪ್ರಿಲ್ 17 : 'ಕೇಸರಿ ಭಯೋತ್ಪಾದನೆ' ಎಂಬ ಪದ ಬಳಕೆ ಕುರಿತು ಬಿಜೆಪಿ ಕಾಂಗ್ರೆಸ್‌ಗೆ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಇಂತಹ ಪದ ಬಳಸಿಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಾಕ್ಷಿಗಳ ಸಮೇತ ತಿರುಗೇಟು ನೀಡಿದೆ.
ಮಂಗಳವಾರ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂದೀಪ್ ಪಾತ್ರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕೇಸರಿ ಭಯೋತ್ಪಾದನೆ ಹೇಳಿಕೆ ಕುರಿತು ಕ್ಷಮಾಪಣೆ ಕೇಳಬೇಕು' ಎಂದು ಆಗ್ರಹಿಸಿದರು.

ಎಐಸಿಸಿ ವಕ್ತಾರ ಪಿ.ಎಲ್.ಪುನಿಯಾ ಅವರು, 'ರಾಹುಲ್ ಗಾಂಧಿ ಅಥವ ಬೇರೆ ಯಾವುದೇ ಕಾಂಗ್ರೆಸ್ ನಾಯಕರು 'ಕೇಸರಿ ಭಯೋತ್ಪಾದನೆ' ಎಂಬ ಪದ ಬಳಕೆ ಮಾಡಿಲ್ಲ. ಪದ ಬಳಕೆ ಮಾಡಿದ ವಿಡಿಯೋ ಅಥವ ಧ್ವನಿಸುರಳಿ ಇದ್ದರೆ ತೋರಿಸಿ' ಎಂದು ಸವಾಲು ಹಾಕಿದ್ದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಪಾತ್ರ ಅವರು ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಈ ಕುರಿತು ಸ್ಪಷ್ಟನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, 'ಎನ್‌ಐಎ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದರು. ನಾಲ್ಕು ವರ್ಷಗಳ ಹಿಂದೆ ಹೊಸ ಸರ್ಕಾರ ರಚನೆಯಾದ ಬಳಿಕ ಸಾಲು-ಸಾಲಾಗಿ ಎಲ್ಲಾ ಪ್ರಕರಣಗಳಲ್ಲೂ ಆರೋಪಿಗಳ ಖುಲಾಸೆಯಾಗುತ್ತಿದೆ' ಎಂದು ಹೇಳಿಕೆ ನೀಡಿದ್ದರು.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿನ 5 ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಹೈದರಾಬಾದ್ ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿತ್ತು. ನಂತರ ಕಾಂಗ್ರೆಸ್ ನಾಯಕರು ಕೇಸರಿ ಭಯೋತ್ಪಾದನೆ ಹೇಳಿಕೆ ನೀಡಿದ್ದರು ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications