ಮಧ್ಯಪ್ರದೇಶ; ಬಿಜೆಪಿ ಭದ್ರಕೋಟೆ ಭೋಪಾಲ್ ಮೇಲೆ ಕಾಂಗ್ರೆಸ್ ಕಣ್ಣು!
ಭೋಪಾಲ್, ನವೆಂಬರ್ 07: ಈ ಬಾರಿಯ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.
ರಾಜ್ಯದ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿವೆ. ಬಿಜೆಪಿಯ ವಶದಲ್ಲಿರುವ ರಾಜ್ಯದ ರಾಜಧಾನಿ ಭೋಪಾಲ್ ಮೇಲೆ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕಣ್ಣಿಟ್ಟಿದೆ. ಬಿಜೆಪಿ ಭೋಪಾಲ್ ಅನ್ನು ಈ ಬಾರಿ ನಿರ್ಲಕ್ಷ ಮಾಡುವಂತಿಲ್ಲ.

ಆಡಳಿತ ಪಕ್ಷ ಬಿಜೆಪಿ ಕೆಲವು ತಿಂಗಳ ಹಿಂದೆ ಭೋಪಾಲ್‌ನ ರೈಲು ನಿಲ್ದಾಣಕ್ಕೆ 'ರಾಣಿ ಕಮಲಾಪತಿ ರೈಲು ನಿಲ್ದಾಣ' ಎಂದು ನಾಮಕರಣ ಮಾಡುವ ಮೂಲಕ ಹಿಂದೂಗಳ ಪರವಾದ ದಾಳ ಉರುಳಿಸಿದೆ. ಭೋಪಾಲ್ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲವೂ ನಗರ ಪ್ರದೇಶದ ಭಾಗವಾಗಿವೆ.
ಕಾಂಗ್ರೆಸ್ ಕಣ್ಣು ಭೋಪಾಲ್ ಮೇಲೆ; ಮಧ್ಯಪ್ರದೇಶ ರಾಜ್ಯದ ರಾಜಧಾನಿಯಾದ ಭೋಪಾಲ್ ಮೇಲೆ ಕಾಂಗ್ರೆಸ್ ಪಕ್ಷ ಕಣ್ಣಿಟ್ಟಿದೆ. 2018ರಲ್ಲಿ ಜಿಲ್ಲೆಯಲ್ಲಿ ಬಿಜೆಪಿ 4, ಕಾಂಗ್ರೆಸ್ 3 ಸೀಟು ಗೆದ್ದಿತ್ತು, ಈ ಮೂಲಕ ಬಿಜೆಪಿಯಿಂದ ಎರಡು ಸೀಟುಗಳನ್ನು ಕಸಿದುಕೊಂಡಿತ್ತು. ಮುಸ್ಲಿಂ ಮತಗಳ ಪ್ರಾಬಲ್ಯ ನಗರದಲ್ಲಿದೆ. ರಾಜ್ಯ ವಿಧಾನಸಭೆಗೆ ಇಬ್ಬರು ಶಾಸಕರನ್ನು ಕಳಿಸಿದ ರಾಜ್ಯದ ಏಕೈಕ ನಗರ ಭೋಪಾಲ್.
ಕಾಂಗ್ರೆಸ್‌ನ ಭದ್ರಕೋಟೆ ಎಂದು ಭೋಪಾಲ್ ಉತ್ತರ ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಇದು ಕೇಂದ್ರ ಬಿಂದು. ಕ್ಷೇತ್ರದ 6 ಬಾರಿಯ ಶಾಸಕ ಆರಿಫ್ ಅಕ್ವಿಲ್ ಈ ಬಾರಿ ಅನಾರೋಗ್ಯದ ಕಾರಣದಿಂದ ಕಣಕ್ಕಿಳಿಯುತ್ತಿಲ್ಲ. ಕಾಂಗ್ರೆಸ್ ಪಕ್ಷ ಅವರ ಪುತ್ರ ಆತೀಪ್ ಅಕ್ವಿಲ್‌ಗೆ ಟಿಕೆಟ್ ನೀಡಿದೆ.
ಬಿಜೆಪಿಯಿಂದ ಮಾಜಿ ಮೇಯರ್ ಅಲೋಕ್ ಶರ್ಮಾ ಅಭ್ಯರ್ಥಿ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಲಾಗಿದೆ. ಎಎಪಿ ಮೊಹಮ್ಮದ್ ಸವೂದ್ ಕಣಕ್ಕಿಳಿಸಿದೆ.
ಉಳಿದಂತೆ ಭೋಪಾಲ್ ಕೇಂದ್ರ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಿವೆ. 2008 ಮತ್ತು 2103ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ಆರಿಫ್ ಮಸೂದ್ ಬಿಜೆಪಿಯ ಸುರೇಂದ್ರ ನಾಥ್ ಸಿಂಗ್ ಸೋಲಿಸಿ ಶಾಸಕರಾದರು.
ಉಳಿದಂತೆ ಸರ್ಕಾರಿ ನೌಕರರು ಅಧಿಕವಾಗಿರುವ ಭೋಪಾಲ್ ನೈಋತ್ಯ, ರಾಜ್ಯದ ಸಚಿವರಾದ ವಿಶ್ವಾಸ್ ಸಾರಂಗ್ ಕಣಕ್ಕಿಳಿಯುವ ನರೇಲಾ ಸೀಟುಗಳು ಸಹ ಭೋಪಾಲ್ ಜಿಲ್ಲೆಯಲ್ಲಿ ಪ್ರಮುಖವಾದವು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸಹ ಭೋಪಾಲ್ ಬಿಜೆಪಿಗೆ ಪ್ರಮುಖವಾದದ್ದು ಎಂದು ಒಪ್ಪಿಕೊಂಡಿದ್ದಾರೆ.
ಭೋಪಾಲ್‌ನ ಇತಿಹಾಸ ನಿಮಗೆ ತಿಳಿಸುವೆ ಎಂದು ಅವರು ಚುನಾವಣಾ ಪ್ರಚಾರದಲ್ಲಿ ರಾಜ್ಯದ ಜನರಿಗೆ ಹೇಳುತ್ತಿದ್ದು, ಇದರ ಭಾಗವಾಗಿಯೇ ಭೋಪಾಲ್ ರೈಲು ನಿಲ್ದಾಣಕ್ಕೆ 'ರಾಣಿ ಕಮಲಾಪತಿ ರೈಲು ನಿಲ್ದಾಣ' ಎಂದು ನಾಮಕರಣ ಮಾಡಿದ್ದಾರೆ. ಭೋಪಾಲ್ ಗೆದ್ದರೆ ಅಕ್ಕಪಕ್ಕದ ಜಿಲ್ಲೆಗಳನ್ನು ಸಹ ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಈ ಚುನಾವಣೆಯಲ್ಲಿ ಭೋಪಾಲ್ ಕೇಂದ್ರ, ಭೋಪಾಲ್ ಉತ್ತರ, ಭೋಪಾಲ್ ದಕ್ಷಿಣ, ನೇರಲ ಕ್ಷೇತ್ರದ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ. ಭೋಪಾಲ್‌ನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಎಂದು ಪಕ್ಷದ ನಗರ ಅಧ್ಯಕ್ಷ ಸುಮಿತ್ ಪಾಂಚೋರಿ ಹೇಳಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಭೋಪಾಲ್ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿದ್ದಾರೆ. ಬ್ಲಾಕ್ ಮತ್ತು ಮಂಡಲ್ ಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸಿದ್ದು, ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ದೇಶದ ಇತರ ರಾಜ್ಯದ ರಾಜಧಾನಿಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿಯಲ್ಲಿ ಭೋಪಾಲ್ ಅಭಿವೃದ್ಧಿಯಲ್ಲಿ ಹಿಂದಿದೆ. ಸರಿಯಾದ ಆಸ್ಪತ್ರೆ, ರಸ್ತೆ ಸೌಕರ್ಯಗಳು ರಾಜಧಾನಿಯಲ್ಲಿಯೇ ಇಲ್ಲ ಎಂದು ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಭೋಪಾಲ್ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications