
ಗುಜರಾತಿನಲ್ಲಿ ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ ಪ್ರಶ್ನಿಸಿದ ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ 17: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡುವ ಮಾತು ಮತ್ತು ನಡುವಳಿಕೆಯಲ್ಲಿನ ವ್ಯತ್ಯಾಸವನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಲ್ಕಿಸ್ ಬಾನೋ ಪ್ರಕರಣವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಆಜಾದಿ ಕೆ ಅಮೃತ್ ಮಹೋತ್ಸವ'ದ ವೇಳೆ 5 ತಿಂಗಳ ಗರ್ಭಿಣಿಯ ಮೇಲೆ ಅತ್ಯಾಚಾರವೆಸಗಿ 3 ವರ್ಷದ ಬಾಲಕಿಯನ್ನು ಕೊಂದವರಿಗೆ ಬಿಡುಗಡೆ ಭಾಗ್ಯವನ್ನು ನೀಡಲಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ಕುಟುಂಬ ರಾಜಕಾರಣ ಹೇಳಿಕೆಗೆ ಪ್ರತಿಕ್ರಿಯಿಸಲು ರಾಹುಲ್ ಗಾಂಧಿ ನಕಾರ
ಕೆಲವು ಅಪರಾಧಿಗಳ ಬಿಡುಗಡೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮಾತು ಮತ್ತು ಕಾರ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಇಡೀ ದೇಶವೇ ನೋಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರದಿಂದ ಎಂಥಾ ಸಂದೇಶ:
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಅಪರಾಧಿಗಳಿಗೆ ಬಿಡುಗಡೆ ನೀಡಿದ್ದು ಆಗಿದೆ. ಸರ್ಕಾರವು ಇಂಥ ನಿರ್ಧಾರಗಳ ಮೂಲಕ ದೇಶದ ಮಹಿಳೆಯರಿಗೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಮಹಿಳಾ ಶಕ್ತಿಯ ಬಗ್ಗೆ ಮಾತನಾಡುವ ದೇಶದ ಮಹಿಳೆಯರಿಗೆ ನೀಡುವ ಸಂದೇಶವೇನು ಎಂದಿರುವ ಅವರು, ಪ್ರಧಾನಿಯವರೇ, ನಿಮ್ಮ ಮಾತು ಮತ್ತು ನಡತೆಯ ನಡುವಿನ ವ್ಯತ್ಯಾಸವನ್ನು ಇಡೀ ದೇಶವೇ ನೋಡುತ್ತಿದೆ," ಎಂದು ಬರೆದುಕೊಂಡಿದ್ದಾರೆ.
ಅಪರಾಧಿಗಳಿಗೆ ಸಿಹಿ ತಿನಿಸಿನೊಂದಿಗೆ ಸ್ವಾಗತ:
ಕಳೆದ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಗರ್ಭಿಣಿ ಮಹಿಳೆ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಇದರ ಜೊತೆಗೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ 11 ಜನರನ್ನು ಗುಜರಾತ್‌ನ ಬಿಜೆಪಿ ಸರ್ಕಾರವು ಬಿಡುಗಡೆ ಮಾಡಿದೆ. 15 ವರ್ಷಗಳ ಬಳಿಕ ಸೋಮವಾರ ಗುಜರಾತ್‌ನ ಗೋಧ್ರಾ ಉಪ ಕಾರಾಗೃಹದಿಂದ ಹೊರಬಂದ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಸಿಹಿತಿಂಡಿ ಮತ್ತು ಹಾರಗಳ ಮೂಲಕ ಸ್ವಾಗತಿಸಲಾಯಿತು.