ರಾಷ್ಟ್ರಪತಿ ಚುನಾವಣೆ: ಎಐಎಡಿಎಂಕೆ ಶಾಸಕರು ಮಾರಾಟಕ್ಕಿದ್ದಾರೆ!!
ಖಾಸಗಿ ಸುದ್ದಿವಾಹಿನಿ ಸಂಸ್ಥೆ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ತಮಿಳುನಾಡಿನ ಅಣ್ಣಾಡಿಎಂಕೆ ಸದಸ್ಯರು, ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೂ ಸುಮ್ಮನೆ ವೋಟ್ ಹಾಕುವುದಿಲ್ಲ ಎಂದಿದ್ದಾರೆ.
ಅಸೆಂಬ್ಲಿಯಲ್ಲಿ, ಲೋಕಸಭೆಯಲ್ಲಿ ವಿಶ್ವಾಸಮತಗಳಿಸಲು ಕುದುರೆ ವ್ಯಾಪಾರ ನಡೆಯೋದನ್ನು ಕೇಳಿದ್ದೇವೆ, ಆದರೆ ರಾಷ್ಟ್ರಪತಿ ಚುನಾವಣೆಗೆ! ಖಾಸಗಿ ಸುದ್ದಿವಾಹಿನಿ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಅಣ್ಣಾಡಿಎಂಕೆ ಸದಸ್ಯರು ಹಿಂದೆ ತಿಂದಿದ್ದೆನ್ನಲ್ಲಾ ಕಕ್ಕಿದ್ದಾರೆ.
ಜಯಲಲಿತಾ ನಿಧನದ ನಂತರ ತಮಿಳುನಾಡು ಅಸೆಂಬ್ಲಿಯಲ್ಲಿ ವಿಶ್ವಾಸಮತ ಗಳಿಸಲು, ಎಐಎಡಿಎಂಕೆ ಪಕ್ಷದ ಎರಡು ಬಣಗಳ ನಡುವೆ ನಡೆದ ರಾಜಕೀಯ ಬೃಹನ್ನಾಟಕದಲ್ಲಿ ಕೋಟಿ..ಕೋಟಿ ರೂಪಾಯಿ, ಚಿನ್ನದಗಟ್ಟಿ ಕೈಕೈ ಬದಲಾಗಿರುವುದನ್ನು ಹಾಲೀ ಶಾಸಕರು ಒಪ್ಪಿಕೊಂಡಿದ್ದಾರೆ.
ಟೈಮ್ಸ್ ನೌ ಸುದ್ದಿವಾಹಿನಿ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಗಮನಿಸಬೇಕಾದ ಅಂಶವೇನಂದರೆ, ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೂ, 'ನಾವು ಸುಮ್ಮನೆ ವೋಟ್ ಹಾಕುವುದಿಲ್ಲ' ಎಂದಿರುವುದು ಪ್ರಜಾತಂತ್ರದ ಅಣಕವಲ್ಲದೆ ಇನ್ನೇನು?
ದೇಶವನ್ನು ಕಾಯುವ ಯೋಧರನ್ನು ಪ್ರತಿನಿಧಿಸುವ ಸೇನಾಪಡೆಯ ಮುಖ್ಯಸ್ಥರನ್ನು ಒಂದು ವೇಳೆ ಜನಪ್ರತಿನಿಧಿಗಳೇ ಆರಿಸುವಂತಿದ್ದರೆ, ಅದಕ್ಕೂ 'ಸಮ್ ಥಿಂಗ್' ಕೇಳುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಅನ್ನೋದು ಜನಸಾಮಾನ್ಯರಲ್ಲಿ ಕಾಡುವ ಪ್ರಶ್ನೆ.
ಜಯಲಲಿತಾ ನಿಧನದ ನಂತರ ಓ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳು ಸರಕಾರ ರಚಿಸಲು ಮುಂದಾಗಿದ್ದಾಗ, ರಿಸಾರ್ಟ್ ರಾಜಕಾರಣ ನಡೆದದ್ದು ಗೊತ್ತೇ ಇದೆ. ಈ ವೇಳೆ ಎರಡರಿಂದ ಆರು ಕೋಟಿ ರೂಪಾಯಿ, ಜೊತೆಗೆ ಚಿನ್ನದ ಗಟ್ಟಿ ಶಾಸಕರಿಗೆ ಸಂದಾಯವಾಗಿದೆ ಎನ್ನುವ ವಿಚಾರವನ್ನು ಕೆಲವು ಶಾಸಕರು ಬಾಯ್ಬಿಟ್ಟಿದ್ದಾರೆ.

ಸ್ಟಾಲಿನ್ ಕುದುರೆ ವ್ಯಾಪಾರದ ಬಗ್ಗೆ ಹೇಳಿದ್ದರು
ತಮಿಳುನಾಡು ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಸ್ಟಾಲಿನ್, ಅವಿಶ್ವಾಸ ಗೊತ್ತುವಳಿಯ ವೇಳೆ 'ಡೀಲ್' ನಡೆದಿದೆ. ಮರುವಿಶ್ವಾಸಮತ ಪ್ರಕ್ರಿಯೆ ನಡೆಯಬೇಕೆಂದು ಒತ್ತಾಯಿಸಿ ಧರಣಿ ಕೂತಿದ್ದರು. ಇದಕ್ಕೆ ಸಭಾಪತಿ ಒಪ್ಪದೇ ಇದ್ದಾಗ, ಡಿಎಂಕೆ ಉಚ್ಚನ್ಯಾಯಾಲಯದ ಮೊರೆ ಹೋಗಿತ್ತು. ಅಲ್ಲೂ ಅರ್ಜಿ ಅನೂರ್ಜಿತಗೊಂಡ ನಂತರ, ಈಗ ಈ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಅಂಗಣದಲ್ಲಿದೆ.

ಮಧುರೈ ಶಾಸಕ ಒಪ್ಪಿಕೊಂಡ ಸತ್ಯ
ದಕ್ಷಿಣ ಮಧುರೈ ಕ್ಷೇತ್ರದ ಶಾಸಕ ಶರವಣನ್, ಸೂಲೂರು ಕ್ಷೇತ್ರದ ಶಾಸಕ ಕಂಗರಾಜ್, ಟೈಮ್ಸ್ ನಡೆಸಿದ ಸ್ಟಿಂಗ್ ಆಪರೇಶನ್ ವೇಳೆ, ಆವತ್ತು ರಿಸಾರ್ಟ್ ರಾಜಕಾರಣದಲ್ಲಿ ಏನೇನು ನಡೆಯಿತು ಎನ್ನುವುದನ್ನು ಫಿಲ್ಟರ್ ಇಲ್ಲದೇ, ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ.

ಹೊಸ ನೋಟು ಹೊಂದಿಸಲು ಹರಸಾಹಸ ಪಟ್ಟ ಶಶಿಕಲಾ ಬಣ
ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧಗೊಂಡ ಬಿಸಿಯಲ್ಲಿ ಇದ್ದಿದ್ದರಿಂದ, ಹೊಸ ನೋಟು ಹೊಂದಿಸಲು ಹರಸಾಹಸ ಪಟ್ಟ ಶಶಿಕಲಾ ಬೆಂಬಲದ ಪಳನಿಸ್ವಾಮಿ ಬಣ, ಕೊನೆಗೆ ಬೇರೆ ದಾರಿಯಿಲ್ಲದೇ ನೋಟು ಕಂತೆಯ ಬದಲು ಚಿನ್ನದ ಗಟ್ಟಿಯನ್ನು ಪರ್ಯಾಯವಾಗಿ ನೀಡಿತ್ತು ಎಂದು ಶಾಸಕ ಮಹೋದಯರು ಹೇಳಿದ್ದಾರೆ.

2 ಕೋಟಿಯಿಂದ 6 ಕೋಟಿಯಷ್ಟು ಹಣ
ಮೊದಲು ಪನ್ನೀರ್ ಸೆಲ್ವಂ ಬಣ ಪ್ರತಿ ಶಾಸಕರಿಗೆ 1 ಕೋಟಿ ಆಫರ್ ನೀಡಿತ್ತು. ಆದ್ರೆ ಶಶಿಕಲಾ ಬಣ 2 ಕೋಟಿಯಿಂದ 6 ಕೋಟಿಯಷ್ಟು ಹಣ, ಜೊತೆಗೆ ಚಿನ್ನ ಕೊಟ್ಟು ಶಾಸಕರನ್ನ ಖರೀದಿಸಿದೆ. ಈ ಸತ್ಯವನ್ನು ಅಣ್ಣಾಡಿಎಂಕೆ ಶಾಸಕ ಶರವಣನ್ ಸ್ಟಿಂಗ್ ಆಪರೇಷನ್‍ನಲ್ಲಿ ಬಾಯ್ಬಿಟ್ಟಿದ್ದಾರೆ.

ಎರಡು ಕೋಟಿ ಪಡೆದು ಮತ ಚಲಾಯಿಸಿದ್ದೇನೆ
ನಾನು 2 ಕೋಟಿ ಪಡೆದು ಪಳನಿಸ್ವಾಮಿಯವರಿಗೆ ಬೆಂಬಲ ನೀಡಿದ್ದೇನೆ. ಕೆಲವರು 6 ಕೋಟಿವರೆಗೂ ಹಣ ಪಡೆದಿದ್ದಾರೆ ಅಂತಾ ಒಪ್ಪಿಕೊಂಡಿದ್ದಾರೆ. ನಾವು ಮೊದಲು ರೆಸಾರ್ಟ್‍ಗೆ ಹೋಗಲು ಬಸ್ ಹತ್ತಿದಾಗ 2 ಕೋಟಿ, ರಾಜ್ಯಪಾಲರರ ಭೇಟಿಗೆ ಏರ್‍ಪೋರ್ಟ್‍ಗೆ ಬಂದಾಗ 4 ಕೋಟಿ, ಕೊಯಂಬತ್ತೂರು ತಲುಪಿದಾಗ ಕೆಲವರಿಗೆ 6 ಕೋಟಿ ಹಣ ಸಂದಾಯವಾಗಿದೆ ಅಂತಾ ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆಗೂ ಸುಮ್ಮನೇ ವೋಟ್ ಹಾಕುವುದಿಲ್ಲ
ಇದೆಲ್ಲಾ ತಲೆತಗ್ಗಿಸುವ ಘಟನೆಯ ನಡುವೆ, ಮುಂಬರುವ ರಾಷ್ಟ್ರಪತಿ ಚುನಾವಣೆಗೂ ಸುಮ್ಮನೇ ವೋಟ್ ಹಾಕುವುದಿಲ್ಲ, ನಮ್ಮ ವೋಟ್ ಎಷ್ಟು ಮುಖ್ಯ ಅನ್ನೋದು ಗೊತ್ತಿದೆ ಎಂದು ಸ್ಟಿಂಗ್ ಆಪರೇಶನ್ ನಲ್ಲಿ ಎಐಎಡಿಎಂಕೆ ಶಾಸಕರು ಹೇಳಿರುವುದು, ಹೊಸ ಚರ್ಚೆಗೆ ನಾಂದಿ ಹಾಡಿದೆ.












Click it and Unblock the Notifications