ವಿಮಾನ ಸಂಸ್ಥೆಗಳಿಗೆ ಭಾರೀ ಶಾಕ್: 9 ದಿನದಲ್ಲಿ ಬರೋಬ್ಬರಿ 600 ಕೋಟಿ ಲಾಸ್!
Bomb Threat: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿಮಾನ ಸೇವೆ ಸಾಕಷ್ಟು ಮುಂದುವರಿದಿದೆ. ಕಳೆದ ಐದು ವರ್ಷದ ಅವಧಿಯಲ್ಲೂ ಸಹ ವಿಮಾನಗಳ ಸೇವೆ ಹಾಗೂ ಬೆಲೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಇದರಿಂದ ಮಧ್ಯಮ ವರ್ಗದವರು ಸಹ ವಿಮಾನಗಳಲ್ಲಿ ಪ್ರಯಾಣ ಮಾಡುವ ಅವಕಾಶ ಸಿಗುತ್ತಿದೆ. ಆದರೆ, ಕಳೆದ 15 ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ವಿಮಾನಯಾನದ ಲೆಕ್ಕಾಚಾರ ತಲೆಕೆಳಗಾಗಿಸಿದೆ.
ಕಳೆದ 15 ದಿನಗಳ ಅವಧಿಯಲ್ಲಿ ಭಾರತದಲ್ಲಿ ಈ ಹಿಂದೆ ಎಂದೂ ಕೇಳದಷ್ಟು ಪ್ರಮಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಕಳೆದ 9 ದಿನಗಳ ಅವಧಿಯಲ್ಲೇ ಬರೋಬ್ಬರಿ 170 ಬೆದರಿಕೆ ಕರೆಗಳು ಬಂದಿವೆ. ಈ ರೀತಿ ಬೆದರಿಕೆಯ ಕರೆಗಳು ಮುಂದುವರಿದರೆ ವಿಮಾನಯಾನ ಸಂಸ್ಥೆಗಳಿಗೆ ಇನ್ನಷ್ಟು ನಷ್ಟವಾಗುವ ಸಾಧ್ಯತೆ ಇದೆ.

ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳನ್ನು ಸ್ಫೋಟಿಸುವ ಹಾಗೂ ಬಾಂಬ್ ಬೆದರಿಕೆಯ ಕರೆಗಳು ನಿರಂತರವಾಗಿ ಬರುತ್ತಿವೆ. ನಿರಂತರ ಬಾಂಬ್ ಬೆದರಿಕೆಯ ಕರೆಗಳಿಂದ ಭಾರತದ ವಿಮಾನಯಾನ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಕಳೆದ 9 ದಿನಗಳಿಂದ ಭಾರತೀಯ ವಿಮಾನ ಸಂಸ್ಥೆಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆಯ ದೂರುಗಳು ಬರುತ್ತಿದ್ದು, ಬರೋಬ್ಬರಿ 600 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರತಿಷ್ಠಿತ ವಿಮಾನಗಳಿಗೆ ಬೆದರಿಕೆ: ದೇಶದ ಪ್ರತಿಷ್ಠಿತ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಕರೆಗಳು ಬರುತ್ತಲ್ಲೇ ಇವೆ. ಭಾರತದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ವಿಸ್ತಾರ, ಆಕಾಸಾ ಹಾಗೂ ಏರ್ ಇಂಡಿಯಾ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದೆ. ಇದರಿಂದ ವಿಮಾನ ಸೇವೆಯಲ್ಲಿ ಭಾರೀ ವ್ಯತ್ಯಾಸವಾಗುತ್ತಿದೆ.
ಕರ್ನಾಟಕದ ವಿಮಾನ ನಿಲ್ದಾಣಕ್ಕೂ ಬೆದರಿಕೆ: ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳಿಗೂ ನಿರಂತರವಾಗಿ ಹುಸಿ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿವೆ. ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಂಪೇಗೌಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಗಳಿಗೂ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು.

ದೇಶದಲ್ಲಿ 10 ದಿನಗಳಲ್ಲಿ ಅಂತರದಲ್ಲಿ 170ಕ್ಕೂ ಹೆಚ್ಚು ವಿಮಾನಗಳಿಗೆ ಈ ರೀತಿ ಬೆದರಿಕೆಯ ಕರೆಗಳು ಬರುತ್ತಿರುವುದರಿಂದ ಭಾರೀ ನಷ್ಟವಾಗುತ್ತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳೆರಡಕ್ಕೂ ಬೆದರಿಕೆ ಕರೆಗಳನ್ನು ಕಡಿಗೇಡಿಗಳು ಮಾಡುತ್ತಿದ್ದಾರೆ. ಆದರೆ, ಈ ರೀತಿ ಏಕಾಏಕಿ ಮತ್ತು ನಿರಂತರವಾಗಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಏಕೆ ಇದರ ಹಿನ್ನೆಲೆ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ವಿಮಾನಯಾನ ಸಂಸ್ಥೆಗೆ ನಷ್ಟ ಯಾಕೆ: ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎನ್ನುವ ಬೆದರಿಕೆ ಕರೆಗಳು ಬಂದಾಗ ವಿಮಾನದ ಹಾರಾಟದಲ್ಲಿ ವ್ಯತ್ಯಾಸವಾಗುತ್ತದೆ. ಆಯಿಲ್, ವಿಮಾನ ಪಾರ್ಕಿಂಗ್ ಫೀಸ್, ಫ್ಲೈಟ್ ನೆಟ್‌ವರ್ಕ್ ಹಾಗೂ ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಹೆಚ್ಚು ಹಣ ಖರ್ಚಾಗುತ್ತದೆ. ವಿಮಾನಗಳ ಸೇವೆಯಲ್ಲಿ (ಹಾರಾಟ) ಭಾರೀ ವ್ಯತ್ಯಾಸವೂ ಆಗುತ್ತಿದೆ. ಈ ಎಲ್ಲಾ ಕಾರಣಗಳಿಂದ 9 ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಭದ್ರತೆ ಹೆಚ್ಚಳ: ವಿಮಾನ ಕೇಂದ್ರ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ನಿರಂತರವಾಗಿ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ಕೇಂದ್ರಗಳಿಗೆ ಭಾರೀ ಭದ್ರತೆ ಕಲ್ಪಿಸಲಾಗಿದೆ.












Click it and Unblock the Notifications