ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮಹಾ ಬಿರುಕು; ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಒಂದು ದಿನದ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಮಹಾ ಬಿರುಕು ಮೂಡಿದೆ. ರಾಜಸ್ಥಾನದ ಟಾಪ್ ಕಾಂಗ್ರೆಸ್ ನಾಯಕರ ನಡುವೆ ಒಳಗೊಳಗೆ ಕುದಿಯುತ್ತಿದ್ದ ಭಿನ್ನಾಭಿಪ್ರಾಯ ಇದೀಗ ಹೊರಬಿದ್ದಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಾಯಕಿ ಯಾರು? ಸೋನಿಯಾ ಗಾಂಧಿ ಅಲ್ಲ ಎಂದು ಕಾಣುತ್ತದೆ. ಗೆಹ್ಲೋಟ್‌ಗೆ ವಸುಂಧರಾ ರಾಜೇ ನಾಯಕಿ ಇರಬಹುದು ಎಂದು ರಾಜಸ್ಥಾನ ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದ್ದಾರೆ.

ಇದೇ ಮೊದಲ ಬಾರಿಗೆ ನಾನು ತಮ್ಮದೇ ಪಕ್ಷದ ಶಾಸಕರು ಮತ್ತು ಸಂಸದರ ವಿರುದ್ಧ ಮಾತನಾಡುತ್ತಿರುವ ಸಿಎಂ ಅನ್ನು ನೋಡುತ್ತಿದ್ದೇನೆ. ಅಲ್ಲದೇ ಬಿಜೆಪಿ ನಾಯಕರನ್ನು ಹೊಗಳುತ್ತಿರುವ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ ಎಂದು ಸಚಿನ್ ಪೈಲಟ್ ತಮ್ಮದೇ ಪಕ್ಷದ ಸಿಎಂ ವಿರುದ್ಧ ಆರೋಪಿಸಿದರು.
ತಮ್ಮದೇ ಕಾಂಗ್ರೆಸ್ ನಾಯಕರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೆಗಳುತ್ತಿರುವುದೇಕೆ? ನಿಜಕ್ಕೂ ಇದು ನನಗೆ ಅರ್ಥವಾಗುತ್ತಿಲ್ಲ. ಇದು ದೊಡ್ಡ ತಪ್ಪು ಎಂದು ಸಚಿನ್ ಪೈಲಟ್ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
2020 ರಲ್ಲಿ ಸಚಿನ್ ಪೈಲಟ್ ಕೆಲವು ಶಾಸಕರೊಂದಿಗೆ ದಂಗೆ ಎದ್ದಾಗ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ತಮ್ಮ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದರು ಎಂದು ಕಳೆದ ವಾರಾಂತ್ಯದಲ್ಲಿ ಅಶೋಕ್ ಗೆಹ್ಲೋಟ್ ಅವರ ಅದ್ಭುತ ಹೇಳಿಕೆಗಳನ್ನು ಅನುಸರಿಸಿ ಈ ಪ್ರತಿವಾದವು ಹೊರಬಿದ್ದಿದೆ.

ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದೇನು?
"2020ರಲ್ಲಿ ಕಾಂಗ್ರೆಸ್‌ನ ಕೆಲವು ಶಾಸಕರು ತಮ್ಮ ಸರ್ಕಾರದ ವಿರುದ್ದ ಬಂಡಾಯ ಎದ್ದಿದ್ದರು. ಈ ವೇಳೆ ಬಿಜೆಪಿ ನಾಯಕರಾದ ವಸುಂಧರಾ ರಾಜೇ ಹಾಗೂ ಕೈಲಾಶ್ ಮೇಘವಾಲ್ ಅವರು ಕಾಂಗ್ರೆಸ್‌ನ ಬಂಡಾಯ ಶಾಸಕರ ಜೊತೆ ಕೈ ಜೋಡಿಸಲು ನಿರಾಕರಿಸಿದರು. ಹೀಗಾಗಿ, ನನ್ನ ಸರ್ಕಾರ ಉಳಿದಿತ್ತು."
"ನಮ್ಮ ಕಾಂಗ್ರೆಸ್‌ನ ಶಾಸಕರೇ ಹಣ ಬಲದ ಮೂಲಕ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಲು ಹೊರಟಿದ್ದರು," ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಆರೋಪಿಸಿದ್ದರು. ಈ ಆರೋಪಕ್ಕೆ ಇದೀಗ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ತಿರುಗೇಟು ನೀಡಿದ್ದಾರೆ.
2020ರ ಜುಲೈನಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ನೇತೃತ್ವದಲ್ಲಿ ಕಾಂಗ್ರೆಸ್‌ನ 18 ಬಂಡಾಯ ಶಾಸಕರ ಗುಂಪು ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ಘೋಷಿಸಿತ್ತು. ಹೀಗಾಗಿ, ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಅಸ್ಥಿರವಾಗಿತ್ತು ಹಾಗೂ 1 ತಿಂಗಳ ಕಾಲ ಈ ಅತಂತ್ರ ಪರಿಸ್ಥಿತಿ ಮುಂದುವರೆದಿತ್ತು.

ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡಿ ಬಂಡಾಯ ಶಮನ ಮಾಡಿತ್ತು. ಈ ವೇಳೆ ಡಿಸಿಎಂ ಹುದ್ದೆಯಿಂದ ಸಚಿನ್ ಪೈಲಟ್ ಅವರನ್ನು ಕೆಳಗಿಳಿಸಲಾಗಿತ್ತು. ಅಲ್ಲದೇ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದಲೂ ವಜಾ ಮಾಡಲಾಗಿತ್ತು.
ಇದೇ ವಿಚಾರವನ್ನು ಕಳೆದ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡಿದ್ದ ಸಿಎಂ ಅಶೋಕ್ ಗೆಹ್ಲೋಟ್, "ತಾವು ಕಾಂಗ್ರೆಸ್ ಪಕ್ಷದ ರಾಜಸ್ಥಾನ ರಾಜ್ಯದ ಅಧ್ಯಕ್ಷರಾಗಿದ್ದ ವೇಳೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಬೈರೋನ್ ಸಿಂಗ್ ಶೇಖಾವತ್ ಮುಖ್ಯಮಂತ್ರಿ ಆಗಿದ್ದರು".
"ಆ ವೇಳೆ ಬಿಜೆಪಿ ಸರ್ಕಾರ ಉರುಳಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಅದು ಅನ್ಯಾಯ ಎಂದು ನಾನು ನಿರಾಕರಿಸಿದ್ದೆ. ಅದೇ ರೀತಿಯಲ್ಲಿ 2020ರಲ್ಲಿ ನನ್ನ ಸರ್ಕಾರ ಉರುಳಿಸುವ ಅವಕಾಶ ಬಿಜೆಪಿ ನಾಯಕರಾದ ವಸುಂಧರಾ ರಾಜೇ ಹಾಗೂ ಮೇಘ್‌ವಾಲ್ ಅವರಿಗಿತ್ತು. ಆದರೆ, ಅವರೂ ಕೂಡಾ ಕಾಂಗ್ರೆಸ್‌ನ ಬಂಡಾಯ ಶಾಸಕರ ಜೊತೆ ಕೈ ಜೋಡಿಸಲಿಲ್ಲ," ಎಂದು ಸ್ಮರಿಸಿದ್ದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕಿ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ, "ಅಶೋಕ್ ಗೆಹ್ಲೋಟ್ ಅವರ ಹೊಗಳಿಕೆ ಕೂಡಾ ದೊಡ್ಡ ಷಡ್ಯಂತ್ರ. ಇದು ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ದೊಡ್ಡ ಷಡ್ಯಂತ್ರ," ಎಂದು ಚಾಟಿ ಬೀಸಿದ್ದರು.
ತಮ್ಮ ಪಕ್ಷದ ಒಳಗಿನ ರಾಜಕೀಯ ಬಂಡಾಯದ ಕಾರಣದಿಂದಾಗಿ ಅಶೋಕ್ ಗೆಹ್ಲೋಟ್ ಈ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ವಸುಂಧರಾ ರಾಜೇ ಕಿಡಿಕಾರಿದ್ದರು.












Click it and Unblock the Notifications