ಫೆಬ್ರವರಿ 23ರಂದು ಭಾರತ್ ಬಂದ್ಗೆ ಕರೆ ನೀಡಿದ ಆಜಾದ್
ನವದೆಹಲಿ, ಫೆಬ್ರವರಿ 13: "ಮೀಸಲಾತಿ ಮೂಲಭೂತ ಹಕ್ಕಲ್ಲ" ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗೆ ನೀಡಿರುವ ತೀರ್ಪಿನ ವಿರುದ್ಧ ಅಸಮಾಧಾನಗೊಂಡಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಫೆಬ್ರವರಿ 23ರಂದು ಭಾರತ್ ಬಂದ್ಗೆ ಕರೆ ನೀಡಿದ್ದಾರೆ.
ದಲಿತ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸರ್ವಪಕ್ಷಗಳ ಸಂಸದರು ಮತ್ತು ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ಸುಪ್ರೀಂ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಜಾದ್ ಆಗ್ರಹಿಸಿದ್ದಾರೆ.
ಫೆ. 16ರಂದು ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ದೆಹಲಿಯ ಮಂಡಿ ಹೌಸ್ ಪ್ರದೇಶದಿಂದ ಸಂಸತ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಫೆ. 23ರಂದು ಭಾರತ್ ಬಂದ್ ಹಮ್ಮಿಕೊಳ್ಳಲಾಗಿದೆ.

ಮೂರು ದಿನಗಳ ಹಿಂದೆ ನ್ಯಾ| ಎಲ್ ನಾಗೇಶ್ವರ್ ರಾವ್ ಮತ್ತು ನ್ಯಾ| ಹೇಮಂತ್ ಗುಪ್ತಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಮೀಸಲಾತಿ ಜನರ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿತ್ತು. ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ತಾನು ನಿರ್ದೇಶನ ನೀಡಲು ಬರುವುದಿಲ್ಲ ಎಂದು ಸುಪ್ರೀಂ ನ್ಯಾಯಪೀಠ ತೀರ್ಪು ನೀಡಿತ್ತು. ಸುಪ್ರೀಂ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲ್ಮನವಿ ಸಲ್ಲಿಸಿದ್ದಾರೆ.












Click it and Unblock the Notifications