ಏ.6ರಂದು 42ನೇ ಭಾಜಪ ಸಂಸ್ಥಾಪನಾ ದಿನ; ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ
ನವದೆಹಲಿ, ಏಪ್ರಿಲ್ 5: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ನಾಳೆ (ಏಪ್ರಿಲ್ 6, ಬುಧವಾರ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾಹಿತಿ ನೀಡಿದ್ದು, ಪಕ್ಷದ ಸಂಸದರು, ಸಚಿವರು, ಶಾಸಕರು, ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ ಎಂದರು.
ಏಪ್ರಿಲ್ 7 ರಿಂದ 20ರ ವರೆಗೆ ದೇಶಾದ್ಯಂತ ಸಭೆ ಆಯೋಜನೆ ಮಾಡಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಸಭೆ, ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೂ ಆಗಿರುವ ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷವು ಏಪ್ರಿಲ್ 6ರ ಬುಧವಾರದಂದು ತನ್ನ 42ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಪ್ರಸ್ತುತ ಭಾರತದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯು 1980ರಲ್ಲಿ ಜನ್ಮ ತಾಳಿದೆ. 4 ದಶಕಗಳ ಹಿಂದೆ ಆರಂಭವಾದ ಪಕ್ಷವನ್ನು ಹಲವು ನಾಯಕರು ಕಾರ್ಯ ಮುನ್ನಡೆಸಿಕೊಂಡು ಬಂದಿದ್ದಾರೆ. ಹಲವು ಹಿರಿ- ಕಿರಿಯ ನಾಯಕರು ಸಂಘಟಿಸಿದ ಬಿಜೆಪಿ ಇದೀಗ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ.

ಬಿಜೆಪಿ ಪಕ್ಷವು ಹಲವಾರು ಅಡೆತಡೆಗಳು ಮತ್ತು ವೈಫಲ್ಯಗಳನ್ನು ಎದುರಿಸಿ, ಪ್ರಸ್ತುತ ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ದೃಢವಾದ ನೆಲೆಯನ್ನು ಕಂಡುಕೊಂಡಿದೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.
ಈ ಬಾರಿಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕೆರೆಗಳನ್ನು ಸ್ವಚ್ಛಗೊಳಿಸುವುದು, ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣೆ ಮತ್ತು ಲಸಿಕೆ ಶಿಬಿರಗಳನ್ನು ಆಯೋಜಿಸುವುದು ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಕಾರ್ಯಕರ್ತರನ್ನು ಕೋರಲಾಗಿದೆ.












Click it and Unblock the Notifications