ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾರ್ಯಕರ್ತರ ಪಾದಯಾತ್ರೆ: ಕಟೀಲ್
ಬೆಂಗಳೂರು, ಅಕ್ಟೋಬರ್ 13 : ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಭಾರತ್ ಜೋಡೊ ಯಾತ್ರೆ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, 'ಪಕ್ಷ ಕಟ್ಟಿ ಬೆಳೆಸಿದ ಹಿರಿಯರು ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಒಬ್ಬೊಬ್ಬರಾಗಿ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತಿದ್ದಾರೆ. ಅದನ್ನು ಸರಿ ಮಾಡುವುದು ಬಿಟ್ಟು ದೇಶಕ್ಕೆ ಭವಿಷ್ಯ ಕೊಡುತ್ತೇನೆ ಎಂದು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
'ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ. ಪಕ್ಷದ ಹಿರಿಯರಾದ ಮಾಧವರಾವ್ ಸಿಂಧಿಯಾ, ರಾಜೇಶ್ ಪೈಲೆಟ್ ಸಹಿತ ಅನೇಕ ನೈಜ ಮುಖಂಡರ ಅಂತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ರಾಹುಲ್‌ಗೆ ಕಾರ್ಯಕರ್ತರು ಪ್ರಶ್ನಿಸಲಿ. ಅವರಿಂದ ಸಮರ್ಪಕ ಉತ್ತರ ಸಿಕ್ಕಿರೆ ಮಾತ್ರ ಕಾರ್ಯಕರ್ತರು ಹೆಜ್ಜೆ ಹಾಕಲಿ. ಈ ಆತ್ಮವಂಚನೆಯ ಪಾದಯಾತ್ರೆ ಯಾಕೆ' ಎಂದು ಕೇಳಿದ್ದಾರೆ.

'ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಯುವನಾಯಕ ಸಚಿನ್ ಪೈಲೆಟ್ ಅವರನ್ನು ಸಿಎಂ ಮಾಡುತ್ತೇನೆ ಎಂದು ರಾಹುಲ್ ಭರವಸೆ ನೀಡಿದ್ದರು. ಯಾರದ್ದೋ ಬ್ಲ್ಯಾಕ್ ಮೇಲ್‌ಗೆ ಹೆದರಿ ಈ ಭರವಸೆಯನ್ನು ಹಿಂದೆ ಪಡೆದುಕೊಂಡರು. ರಾಹುಲ್ ಅವರಿಗೆ ತಮ್ಮ ಪಕ್ಷದಲ್ಲಿಯೇ ಯುವಕರಿಗೆ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ದೇಶದ ಯುವಜನಾಂಗಕ್ಕೆ ಅವರು ಯಾವ ಭವಿಷ್ಯ ನೀಡಬಲ್ಲರು' ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ನಮ್ಮ ನಾಯಕರ ಜಪ ಮಾಡುತ್ತಿರುವ ಸಿದ್ದರಾಮಯ್ಯ:
'ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ದೇವರನ್ನು ನೆನೆಯುತ್ತಾರೆ. ಆದರೆ, ಬಾಲಕನ(ರಾಹುಲ್ ಗಾಂಧಿ) ಜೊತೆ ಓಡುವ ಸಿದ್ದರಾಮಯ್ಯ ಬಿಜೆಪಿ ನಾಯಕರ ಜಪ ಮಾಡುತ್ತಿರುವುದನ್ನು ನೋಡಿದರೆ, ಬಿಜೆಪಿ ನಾಯಕರನ್ನೇ ದೇವರು ಅಂದುಕೊಂಡ ಹಾಗಿದೆ' ಎಂದು ಬಿಜೆಪಿ ರಾಜ್ಯ ಘಟಕ ವ್ಯಂಗ್ಯವಾಡಿದೆ.

'ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಈ ಇಳಿ ವಯಸ್ಸಿನಲ್ಲಿ ಕಷ್ಟವಾದರೂ ಬಲವಂತದ ಪಾದಯಾತ್ರೆ ಮಾಡುತ್ತಿರುವ ಸಿದ್ದರಾಮಯ್ಯನವರೇ, ನೀವು ಮೋರ್ ಸ್ಟ್ರಾಂಗ್ ಅಂತ ಹೇಳಿಕೊಂಡಿದ್ದೀರಿ, ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ' ಎಂದು ಹೇಳಿದೆ.
'ಸಿದ್ದರಾಮಯ್ಯ ತಾವೇ ಸ್ಟ್ರಾಂಗ್ ಅಂದುಕೊಂಡಿದ್ದಾರೆ. ಆದರೆ, ಜನತೆಯೇ ಮೋರ್ ಸ್ಟ್ರಾಂಗ್ ಆಗಿದ್ದಾರೆ. ಜನತೆಯ ಮುಂದೆ ಯಾರೂ ಸ್ಟ್ರಾಂಗ್ ಅಲ್ಲ. ರಾಜಕೀಯದಲ್ಲೂ ಜನರೇ ಸ್ಟ್ರಾಂಗ್. ಭ್ರಮಾಲೋಕದಿಂದ ಸಿದ್ದರಾಮಯ್ಯ ಹೊರಬರಬೇಕು. ಯಾರು ಸ್ಟ್ರಾಂಗ್ ಎಂದು ಮುಂದಿನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ' ಎಂದು ಟ್ವೀಟಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಪಾದಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಾಗಲಿದೆ. ಸೂಮಾರು 3, 500 ಕಿ.ಮೀ ಕ್ರಮಿಸುವ ಪಾದಯಾತ್ರೆ ಈಗಾಗಲೇ ತಮಿಳುನಾಡು ಹಾಗೂ ಕೇರಳವನ್ನು ಕ್ರಮಿಸಿದೆ. ಪ್ರಸ್ತುತ ಕರ್ನಾಟಕದಲ್ಲಿ ಪಾದಯಾತ್ರೆ ಸಾಗುತ್ತಿದ್ದು, ಜನಬೆಂಬಲ ವ್ಯಕ್ತವಾಗಿದೆ.
ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಗೆ ಪ್ರತಿಯಾಗಿ ಜನ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜನ ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿದ್ದಾರೆ.












Click it and Unblock the Notifications