ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಅಖಿಲೇಶ್ ಯಾದವ್, ಮಾಯಾವತಿ ಜೊತೆಯಾಗುವುದು ಅನುಮಾನ
ನವದೆಹಲಿ, ಡಿ. 27: ಜನವರಿ ಮೊದಲ ವಾರದಲ್ಲಿ ಉತ್ತರ ಪ್ರದೇಶವನ್ನು ಪ್ರವೇಶಿಸಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಿಂದ ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷದ ನಾಯಕರು ಹೊರಗುಳಿಯುವ ಸಾಧ್ಯತೆಯಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಚೌಧರಿ ಅವರನ್ನು ಪಕ್ಷದ ಯಾತ್ರೆಗೆ ಸೇರುವಂತೆ ಕಾಂಗ್ರೆಸ್ ಆಹ್ವಾನಿಸಿತ್ತು.
ಅಖಿಲೇಶ್ ಯಾದವ್ ಅವರು ಭಾರತ್ ಜೋಡೋ ಯಾತ್ರೆಗೆ ಸೇರದಿರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ, ಅಖಿಲೇಶ್ ಯಾದವ್ ಅವರು ಪಾದಯಾತ್ರೆಯಲ್ಲಿ ಭಾಗವಹಿಸಲು ಪಕ್ಷದ ನಾಯಕರನ್ನು ಕಳುಹಿಸುತ್ತಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತ್ ಜೋಡೋ ಯಾತ್ರೆಯ ಕಲ್ಪನೆಯನ್ನು ಸಮಾಜವಾದಿ ಪಕ್ಷ ಬೆಂಬಲಿಸುತ್ತದೆ. ಆದರೆ ಸಂಭವನೀಯ ರಾಜಕೀಯ ಮೈತ್ರಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕುವ ಮೂಲಕ ಅದನ್ನು ಗೊಂದಲಗೊಳಿಸಲು ಬಯಸುವುದಿಲ್ಲ ಎಂದು ಪಕ್ಷದ ವಕ್ತಾರ ಘನಶ್ಯಾಮ್ ತಿವಾರಿ ತಿಳಿಸಿದ್ದಾರೆ.
"ಭಾರತ್ ಜೋಡೋದ ಧ್ಯೇಯವನ್ನು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ನಾವು ಬೆಳೆದ ಭಾರತದ ಕಲ್ಪನೆಯನ್ನು ಬಿಜೆಪಿ ಒಡೆಯಲು ಮತ್ತು ವಿಷಪೂರಿತಗೊಳಿಸಲು ಪ್ರಯತ್ನಿಸುತ್ತಿದೆ. ಭಾರತ್ ಜೋಡೋ ಯಾತ್ರೆ ಒಂದು ಅಸಾಧಾರಣ ಯಾತ್ರೆಯಾಗಿದೆ. ಆದರೆ ಇದು ರಾಜಕೀಯ ಮೈತ್ರಿ ನಿರ್ಮಾಣದ ಪ್ರಯತ್ನವಲ್ಲ. ನಾವು ಇದನ್ನು ರಾಜಕೀಯ ಮೈತ್ರಿಯನ್ನು ಕಟ್ಟುವ ಆಂದೋಲನವನ್ನಾಗಿ ಮಾಡಲು ಬಯಸುವುದಿಲ್ಲ" ಎಂದು ಘನಶ್ಯಾಮ್ ತಿವಾರಿ ಹೇಳಿದ್ದಾರೆ.
ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಚೌಧರಿ ಅವರು ಮೊದಲೇ ಕಾರ್ಯಕ್ರಮಗಳು ನಿಶ್ಚಿತವಾಗಿವೆ ಹೀಗಾಗಿ ಕಾಂಗ್ರೆಸ್ ಮೆರವಣಿಗೆಗೆ ಸೇರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷದ ವಕ್ತಾರ ರೋಹಿತ್ ಜಾಖರ್ ಅವರು ಆರ್‌ಎಲ್‌ಡಿ ಯಾತ್ರೆಯನ್ನು ಬೆಂಬಲಿಸುತ್ತದೆ, ಆದರೆ ಮೆರವಣಿಗೆಯನ್ನು ರಾಜಕೀಯ ಕಾರಣಗಳ ಮೂಲಕ ನೋಡಬಾರದು ಎಂದು ಹೇಳಿದ್ದಾರೆ.
"ನಾವು ಈಗಾಗಲೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಜೊತೆ ಸರ್ಕಾರವನ್ನು ನಡೆಸುತ್ತಿದ್ದೇವೆ. ನಾವು ಸೈದ್ಧಾಂತಿಕವಾಗಿ ಯಾತ್ರೆಯನ್ನು ಬೆಂಬಲಿಸುತ್ತೇವೆ" ಎಂದು ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರ ಪಕ್ಷ ಆರ್‌ಎಲ್‌ಡಿ, ಯಾತ್ರೆಯಿಂದ ಹೊರಗುಳಿಯಲು ನಿರ್ಧರಿಸಿದೆ. ಇದು 2024 ರ ಸಾರ್ವತ್ರಿಕ ಚುನಾವಣೆಗೆ ಸಂಭವನೀಯ ರಾಜಕೀಯ ಮೈತ್ರಿಯ ಬಗ್ಗೆ ವದಂತಿ ಹುಟ್ಟುಹಾಕಬಹುದು ಎಂದು ಹೇಳಿದೆ.
ಸಮಾಜವಾದಿ ಪಕ್ಷಕ್ಕೆ ಕಾಂಗ್ರೆಸ್ ಆಹ್ವಾನ ರಾಜಕೀಯವಾಗಿಯೂ ಮಹತ್ವದ್ದಾಗಿದೆ. 2024 ರ ಚುನಾವಣೆಯಲ್ಲಿ ಪ್ರಭಾವ ಬೀರಲು ಬಯಸಿದರೆ, ಉತ್ತರ ಪ್ರದೇಶದ ಅತಿದೊಡ್ಡ ವಿರೋಧ ಪಕ್ಷವಾದ ಅಖಿಲೇಶ್ ಯಾದವ್ ಅವರ ಪಕ್ಷದ ಬೆಂಬಲದ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ.
ಇತ್ತ, ಅಖಿಲೇಶ್ ಯಾದವ್ ಈ ವಿಷಯದಲ್ಲಿ ಎಚ್ಚರಿಕೆಯ ವಿಧಾನವನ್ನು ಆರಿಸಿಕೊಂಡಿದ್ದಾರೆ ಎಂದು ತೋರುತ್ತದೆ. 2017 ರ ರಾಜ್ಯ ಚುನಾವಣೆಯಲ್ಲಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಾಗ ಎದುರಿಸಿದ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ತೆಗೆದುಕೊಂಡಿದದೆ ಎಂಬ ವದಂತಿಗಳಿವೆ.
ಇನ್ನು, ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದ ನೆಲೆಯನ್ನು ಕಳೆದುಕೊಳ್ಳುತ್ತಿರುವ ಮಾಯಾವತಿ ಅವರು ತಮ್ಮ ಇತ್ತೀಚಿನ ಹೇಳಿಕೆಗಳಲ್ಲಿ ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. 2022 ರ ಚುನಾವಣೆಯ ಮೊದಲು, ಅವರು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಬಿಜೆಪಿ ವಿರೋಧಿ ಮತಗಳ ವಿಭಜನೆಗೆ ಕಾರಣವಾಗುತ್ತದೆ ಎಂದು ಹೇಳಿದ್ದರು.












Click it and Unblock the Notifications