Namma Metro Pink Line: ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಮತ್ತಷ್ಟು ವಿಳಂಬ; ಕಾರಣವನೇನು?
ಬಹು ನಿರೀಕ್ಷಿತ ಬೆಂಗಳೂರು ಗುಲಾಬಿ ಮಾರ್ಗದ ಕಾಮಗಾರಿ ಭರದಿಂದ ನಡೆಯುತ್ತಿದೆ. 2025ರ ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸಲು ಯೋಜಿಸಲಾಗಿತ್ತು, ಆದರೆ ಇದೀಗ ಅಂದುಕೊಂಡಿದ್ದಕ್ಕಿಂತ ಕಾಮಗಾರಿ ತಡವಾಗುತ್ತಿದ್ದು, ಒಂದು ವರ್ಷ ತಡವಾಗಿ ಅಂದರೆ 2026ರ ಡಿಸೆಂಬರ್ ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವರದಿಯಾಗಿದೆ. ಬೆಂಗಳೂರು ಮೆಟ್ರೋದ ಅತಿ ಉದ್ದದ ಸುರಂಗ ಮಾರ್ಗ ಹೊಂದಿರುವ ಪಿಂಕ್ ಲೈನ್ ತಡವಾಗಿ ಕಾರ್ಯಾಚರಣೆ ಆರಂಭಿಸುತ್ತಿರುವುದು ಈ ಮಾರ್ಗದ ಸಾರ್ವಜನಿಕರಲ್ಲಿ ಬೇಸರ ತರಿಸಿದೆ.
ಬೆಂಗಳೂರು ಮೆಟ್ರೋ ಮಾರ್ಗದಲ್ಲಿ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗ ಇದಾಗಲಿದ್ದೆ. 21.26 ಕಿಲೋ ಮೀಟರ್ ಮಾರ್ಗದಲ್ಲಿ 18 ನಿಲ್ದಾಣಗಳು ನಿರ್ಮಾಣವಾಗಲಿದೆ. 12 ಭೂಗತ ನಿಲ್ದಾಣಗಳು ನಿರ್ಮಾಣವಾಗಲಿದ್ದು, 6 ನಿಲ್ದಾಣಗಳು ಎಲಿವೇಟೆಡ್ ಮಾರ್ಗದಲ್ಲಿ ನಿರ್ಮಾಣವಾಗಲಿವೆ. ಎಲಿವೇಟೆಡ್ ಮಾರ್ಗವು 2025ರ ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ.

ಈ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರು ದಕ್ಷಿಣ ಮತ್ತು ಉತ್ತರ ಮಾರ್ಗವನ್ನು ಜೋಡಿಸುವ ಈ ಮಾರ್ಗ ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ತಡವಾಗಲು ಕಾರಣವೇನು?
ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ. ಎತ್ತರದ (ಎಲಿವೇಟೆಡ್) ವಿಭಾಗವು ಡಿಸೆಂಬರ್ 2025ರ ವೇಳೆಗೆ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ 13.76 ಕಿ.ಮೀ ಉದ್ದದ ಭೂಗತ ಮಾರ್ಗವು 2026ರ ಡಿಸೆಂಬರ್ ವೇಳೆಗೆ ಉದ್ಘಾಟನೆಯಾಗಲಿದೆ.
ಸುರಂಗ ಮಾರ್ಗವನ್ನು ಕೊರೆಯುವ ಕೆಲಸವನ್ನು ಬಿಎಂಆರ್ ಸಿಎಲ್ ಯಶಸ್ವಿಯಾಗಿ ಮುಗಿಸಿದೆ. ಭದ್ರಾ ಹೆಸರಿನ ಸುರಂಗ ಕೊರೆಯುವ ಯಂತ್ರ (TBM) ಒಂಭತ್ತನೇ ಮತ್ತು ಕೊನೆಯ ಸುರಂಗವನ್ನು ಕೊರೆದು ಮುಗಿಸಿದೆ. ಕಳೆದ ವಾರ ನಾಗವಾರ ನಿಲ್ದಾಣದ ಬಳಿಕ ಸುರಂಗ ಕೊರೆದು ಹೊರಬಂದಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದೆ.
2025ರ ಅಕ್ಟೋಬರ್ ವೇಳೆಗೆ ಸುರಂಗ ಮಾರ್ಗದಲ್ಲಿ ಟ್ರಾಕ್ ಹಾಕುವ ಕೆಲಸ ಮುಗಿಯುವ ಸಾಧ್ಯತೆ ಇದೆ. ಬಳಿಕ ಸಿಗ್ನಲಿಂಗ್ ವ್ಯವಸ್ಥೆಯನ್ನು ಮುಗಿಸಲು 6-8 ತಿಂಗಳು ಸಮಯ ಬೇಕಾಗುತ್ತದೆ. ಬಳಿಕ ನಾಲ್ಕು ತಿಂಗಳು ಟ್ರಯಲ್ ರನ್ ನಡೆಯಲಿದ್ದು, ಬಳಿಕವಷ್ಟೇ ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಲಿದೆ.
ನಮ್ಮ ಮೆಟ್ರೋ 2ನೇ ಹಂತಕ್ಕಾಗಿ ಟ್ರ್ಯಾಕ್‌ಗಳನ್ನು ಹಾಕಲು ಟೆಕ್ಸ್‌ಮ್ಯಾಕೋ ರೈಲ್ ಅಂಡ್ ಇಂಜಿನಿಯರಿಂಗ್ ಲಿಮಿಟೆಡ್ 521.76 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದುಕೊಂಡಿದೆ. ಡೈರಿ ಸರ್ಕಲ್ ಮತ್ತು ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣಗಳ ನಡುವೆ ಹಳಿ ಜೋಡಣಾ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಂಕ್ ಲೈನ್‌ಗಾಗಿ 16 ಚಾಲಕ ರಹಿತ ರೈಲುಗಳನ್ನು ಬೆಂಗಳೂರಿನಲ್ಲೇ ತಯಾರಿಸಲಾಗುತ್ತದೆ. ಬಿಇಎಂಎಲ್ ಜೂನ್ 2025ರ ವೇಳೆಗೆ ಮೊದಲ ರೈಲನ್ನು ಪೂರೈಸುವ ನಿರೀಕ್ಷೆ ಮಾಡಲಾಗಿದ್ದು, ಅಗತ್ಯವಿರುವ ಅನುಮೋದನೆಗಳು ದೊರೆತ ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳನ್ನು ಪೂರೈಕೆ ಮಾಡುವುದಾಗಿ ವರದಿಯಾಗಿದೆ.












Click it and Unblock the Notifications