Bengaluru–Vijayawada ಗ್ರೀನ್‌ಫೀಲ್ಡ್ ಹೈವೇಗೆ ಗಡ್ಕರಿ ಅನುಮೋದನೆ- ಇದು ಪ್ರವೇಶ ನಿಯಂತ್ರಿತ ಕಾರಿಡಾರ್, ಅಂಕಿಅಂಶ, ವಿವರ
ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಚಂದ್ರಶೇಖರಪುರಂ ಮತ್ತು ಪೋಲಾವರಂ ನಡುವೆ 32 ಕಿಮೀ ಉದ್ದದ 6 ಲೇನ್ ಪ್ರವೇಶ ನಿಯಂತ್ರಿತ ಹೆದ್ದಾರಿ ಬರಲಿದೆ.
ಬೆಂಗಳೂರು, ಫೆಬ್ರವರಿ 25: ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಚಂದ್ರಶೇಖರಪುರಂ ಮತ್ತು ಪೋಲಾವರಂ ನಡುವೆ 32 ಕಿಮೀ ಉದ್ದದ 6 ಲೇನ್ ಪ್ರವೇಶ ನಿಯಂತ್ರಿತ ಹೆದ್ದಾರಿ ಬರಲಿದೆ. ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತಮಾಲಾ ಪರಿಯೋಜನಾ ಯೋಜನೆಯಡಿ ಬರುವ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ. 1292.65 ಕೋಟಿ ರೂಪಾಯಿ ಬಜೆಟ್‌ನಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿಯಲ್ಲಿ (ಎಚ್‌ಎಎಂ) ಕಾರಿಡಾರ್ ನಿರ್ಮಾಣವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

'ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ 32.00 ಕಿ.ಮೀ ಉದ್ದದ 6-ಲೇನ್ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಗೆ ಒಪ್ಪಿಗೆ ನೀಡಿದ್ದಾರೆ. ಇದು ಚಂದ್ರಶೇಖರಪುರಂನಿಂದ ಪೋಲಾವರಂವರೆಗೆ (NH-544G) ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ 1,292.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದು ಆಂಧ್ರಪ್ರದೇಶದಲ್ಲಿ ಬರುತ್ತದೆ' ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿದುಬಂದಿದೆ.
ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ. ಇದು ಪ್ರಸ್ತುತ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯನ್ನು (NH- 44) ಕೊಡಿಕೊಂಡ ಚೆಕ್‌ಪೋಸ್ಟ್‌ವರೆಗೆ ಬಳಸಿಕೊಳ್ಳುತ್ತದೆ. ಪ್ರಸ್ತಾವಿತ ಗ್ರೀನ್‌ಫೀಲ್ಡ್ ಕಾರಿಡಾರ್ NH-44 ರ ಕೋಡೂರು ಗ್ರಾಮದ ಕೊಡಿಕೊಂಡ ಚೆಕ್‌ಪೋಸ್ಟ್‌ನಿಂದ NH -16 ರ ಅಡ್ಡಂಕಿ ಬಳಿಯ ಮುಪ್ಪಾವರಂ ಗ್ರಾಮದವರೆಗೂ ಇರಲಿದೆ ಎಂದು ಸಚಿವ ಗಡ್ಕರಿ ಮಾಹಿತಿ ನೀಡಿದರು.

ಮುಪ್ಪಾವರಂನಿಂದ ವಿಜಯವಾಡದವರೆಗೆ, ಆರ್ಥಿಕ ಕಾರಿಡಾರ್ ಅಸ್ತಿತ್ವದಲ್ಲಿರುವ NH-16 ಅನ್ನು ಬಳಸಿಕೊಳ್ಳುತ್ತದೆ. ಒಟ್ಟಾರೆ, ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್ 342.5 ಕಿ.ಮೀ ಉದ್ದವಿರುತ್ತದೆ.
19,200 ಕೋಟಿ ರೂಪಾಯಿ ವೆಚ್ಚದ ಅಂದಾಜಿನ ನಿರ್ಮಾಣವನ್ನು 14 ಪ್ಯಾಕೇಜ್‌ಗಳ ಮೂಲಕ ಕಾರ್ಯಗತಗೊಳಿಸಲಾಗುವುದು. ಪ್ರಸ್ತುತ ಯೋಜನೆಯ ಪ್ರಕಾರ, ಇದನ್ನು 2026 ರ ವೇಳೆಗೆ ಸಾರ್ವಜನಿಕ ಬಳಕೆಗೆ ತೆರೆಯಲಾಗುವುದು.
ಏತನ್ಮಧ್ಯೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅನ್ನು ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. 9000 ಕೋಟಿ ರೂಪಾಯಿಗಳ ಯೋಜನೆಯು ಎರಡೂ ನಗರಗಳ ನಡುವಿನ 117 ಕಿಲೋಮೀಟರ್‌ಗಳ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ.

ಎಕ್ಸ್‌ಪ್ರೆಸ್‌ವೇ ಅನ್ನು ಆರು-ಪಥದ ವಿಸ್ತರಣೆಯಾಗಿ ನಿರ್ಮಿಸಲಾಗಿದೆ, ಜೊತೆಗೆ ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಎರಡು-ಪಥದ ಸೇವಾ ರಸ್ತೆಗಳನ್ನು ನಿರ್ಮಿಸಲಾಗಿದೆ, ಇದು 10-ಲೇನ್ ಕಾರಿಡಾರ್ ಆಗಿದೆ.
ಇದು 2 ಹಂತಗಳನ್ನು ಒಳಗೊಂಡಿದೆ: ಬೆಂಗಳೂರು - ನಿಡಘಟ್ಟ ನಡುವೆ 58 ಕಿಮೀ ಹಂತ 1 ಮತ್ತು ನಿಡಘಟ್ಟ - ಮೈಸೂರು ನಡುವೆ 61 ಕಿಮೀ ಹಂತ 2. ಇದು ಒಟ್ಟು 19 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು 4 ರೈಲ್ವೆ ಮೇಲ್ಸೇತುವೆಗಳು (ROBs) ವಾಹನಗಳು ಮತ್ತು ಪಾದಚಾರಿಗಳಿಗೆ 50 ಅಂಡರ್‌ಪಾಸ್‌ಗಳನ್ನು ಹೊಂದಿರುತ್ತದೆ.
ಗ್ರೀನ್‌ಫೀಲ್ಡ್ ವಿಭಾಗಗಳು ಬಿಡದಿ (7 ಕಿಮೀ), ರಾಮನಗರ-ಚನ್ನಪಟ್ಟಣ (22 ಕಿಮೀ), ಮದ್ದೂರು (3.5 ಕಿಮೀ ಎತ್ತರಿಸಿದ ಹೆದ್ದಾರಿ ಸೇರಿದಂತೆ 7 ಕಿಮೀ), ಮಂಡ್ಯ (10 ಕಿಮೀ) ಮತ್ತು ಶ್ರೀರಂಗಪಟ್ಟಣ (7 ಕಿಮೀ) ಸುತ್ತ ಬೈಪಾಸ್‌ಗಳನ್ನು ರೂಪಿಸುತ್ತವೆ. ಕುಂಬಳಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬೂತ್ ನಿರ್ಮಿಸಲಾಗುವುದು.
ಒಟ್ಟು ಅಂದಾಜು ವೆಚ್ಚ: ರೂ. 8,066 ಕೋಟಿ
ಯೋಜನೆಯ ಉದ್ದ: 119 ಕಿಮೀ
ಲೇನ್‌ಗಳು: 6 - 10
ಮಾಲೀಕರು: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI)
ಸ್ಥಿತಿ: ನಿರ್ಮಾಣ ಹಂತದಲ್ಲಿದೆ
ಯೋಜನೆಯ ಮಾದರಿ: ಹೈಬ್ರಿಡ್ ಆನ್ಯುಟಿ ಮೋಡ್ (HAM)












Click it and Unblock the Notifications