Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಟಕ್ಕರ್: ಹೊಸೂರು ವಿಮಾನ ನಿಲ್ದಾಣಕ್ಕೆ ಜಾಗ ಫೈನಲ್
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕ್ರಿಯೆಯು ವಿಳಂಬವಾಗುತ್ತಲ್ಲೇ ಇದೆ. ನಾಲ್ಕು ಜಾಗಗಳನ್ನು ಕೇಂದ್ರ ಅಧ್ಯಯನ ತಂಡವು ಬಂದು ಪರಿಶೀಲನೆ ಮಾಡಿ ಮೂರು ತಿಂಗಳುಗಳೇ ಕಳೆದರೂ ಇನ್ನೂ ಇಲ್ಲಿಯ ವರೆಗೆ ಅಧ್ಯಯನ ವರದಿ ಸಲ್ಲಿಕೆ ಮಾಡಿಲ್ಲ. ಆದರೆ, ತಮಿಳುನಾಡಿನ ಹೊಸೂರಿನಲ್ಲಿ ಎರಡೂ ಜಾಗಗಳನ್ನೂ ಕೇಂದ್ರ ತಂಡ ಫೈನಲ್ ಮಾಡಿದೆ. ಇದೀಗ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಬೆಂಗಳೂರಿಗೆ ಟಕ್ಕರ್ ಕೊಡುವುದಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ.
ಬೆಂಗಳೂರು ಅಭಿವೃದ್ಧಿ ಆಗುತ್ತಿದ್ದಂತೆಯೇ ನೆರೆಯ ರಾಜ್ಯಗಳ ಕಣ್ಣು ನಮ್ಮ ಮೇಲೆ ಬಿದ್ದಿದೆ. ಇಲ್ಲಿನ ಹೂಡಿಕೆ ಹಾಗೂ ಲಾಭಗಳ ಮೇಲೆ ನೆರೆಯ ರಾಜ್ಯಗಳು ಸಹ ಕಣ್ಣಿಟ್ಟಿವೆ. ಇದೊಂದು ರೀತಿ ಉದ್ಯಮ ಪೈಪೋಟಿ ಮಾದರಿಯೇ ಆಗಿದೆ. ಸ್ಪರ್ಧಾತ್ಮಕವಾದ ಪೈಪೋಟಿ ಕರ್ನಾಟಕ ಹಾಗೂ ಉಳಿದ ರಾಜ್ಯಗಳೊಂದಿಗೆ ಇದೆ. ಬೆಂಗಳೂರಿನಿಂದ ಕೆಲವೇ ಕಿ. ಮೀ ದೂರದಲ್ಲಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಇದರ ಹಿಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಸರಕು - ಸಾಗಾಣಿಕೆಯನ್ನು ಸೆಳೆಯುವ ಪ್ಲ್ಯಾನ್ ಸಹ ಇದೆ.

ಇದೀಗ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದ ಎರಡೂ ಜಾಗಗಳನ್ನೂ ಕೇಂದ್ರ ತಂಡ ಅನುಮತಿ ನೀಡಿದ್ದು. ಈ ಎರಡೂ ಜಾಗದಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ಪ್ರಸ್ತಾವನೆ ಸಲ್ಲಿಸಿದೆ. ಇದು ಕರ್ನಾಟಕಕ್ಕೆ ಭಾರೀ ಹಿನ್ನಡೆ ಅಂತಲೇ ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನೂ ಜಾಗ ಅಂತಿಮವಾಗಿಲ್ಲ. ಪ್ರಾಥಮಿಕ ಹಂತದ ಪ್ರಕ್ರಿಯೆಗಳೇ ಪೂರ್ಣಗೊಂಡಿಲ್ಲ. ಆದರೆ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ.
ಹೊಸೂರು ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಪ್ರಾರಂಭವಾಗಿದೆ. ಗ್ರೀನ್‌ಫೀಲ್ಡ್ ಯೋಜನೆಗೆ ಎರಡೂ ಜಾಗಗಳೂ ಸೂಕ್ತವಾಗಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಂಡ ವರದಿ ನೀಡಿದೆ.
ಹೊಸೂರಿನ ತನೇಜಾ ಏರೋಸ್ಪೇಸ್ ಹಾಗೂ ಏವಿಯೇಷನ್ ಲಿಮಿಟೆಡ್ (TAAL) ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪದ ಗ್ರಾಮಗಳು ಮತ್ತು ಹೊಸೂರು ಬಳಿಯ ನೀಲಗಿರಿಯ ಉತ್ತರದ ಸ್ಥಳ ಆಯ್ಕೆಯಾಗಿವೆ. ಈ ಸಂಬಂಧ ಅಂತಿಮ ನಿರ್ಧಾರಕ್ಕಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಅಲ್ಲಿನ ಸರ್ಕಾರವು ಒಂದು ತಿಂಗಳೊಳಗೆ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಇನ್ನು ಮುಖ್ಯವಾಗಿ ವಿಮಾನ ನಿಲ್ದಾಣವು ತಮಿಳುನಾಡಿನಲ್ಲಿ ಮುಂಬರುವ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಸಮೀಪದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯು ಬೆಂಗಳೂರು ಹಾಗೂ ನೆರೆಯ ಪ್ರಮುಖ ಪ್ರದೇಶಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ರೀತಿ ತಮಿಳುನಾಡು ಹೊಸೂರು ವಿಮಾನ ನಿಲ್ದಾಣದ ವಿಚಾರದಲ್ಲಿ ವೇಗವಾಗಿ ಯೋಜನೆ ರೂಪಿಸಿಕೊಳ್ಳುತ್ತಿದೆ. ಆದರೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಪ್ರಕ್ರಿಯೆಗಳಲ್ಲೇ ವಿಳಂಬವಾಗಿದೆ.












Click it and Unblock the Notifications