Waqf Bill: ಬಂಗಾಳ ಘರ್ಷಣೆಯಲ್ಲಿ ಮೂವರು ಸಾವು; ಕೇಂದ್ರ ಪಡೆ ನಿಯೋಜಿಸಲು ಕೋರ್ಟ್ ಸೂಚನೆ
ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸೆಗೆ ತಿರುಗಿದ್ದರಿಂದ ಮೂವರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಮೃತಪಟ್ಟಿದ್ದು, ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ನ್ಯಾಯಾಲಯ ಸೂಚನೆ ಕೊಟ್ಟಿದೆ.
ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಹಿಂಸಾಚಾರ ಭುಗಿಲೆದ್ದಿದೆ, ಘರ್ಷಣೆಗೆ ಸಂಬಂಧಿಸಿದಂತೆ 118 ಜನರನ್ನು ಬಂಧಿಸಲಾಗಿದೆ. ಮೃತರಲ್ಲಿ ಇಬ್ಬರು ಘರ್ಷಣೆಯಲ್ಲಿ ಸಾವನ್ನಪ್ಪಿದರೆ, ಒಬ್ಬ ಗುಂಡು ಹಾರಿಸಿದಾಗ ಸಾವನ್ನಪ್ಪಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಜಾವೇದ್ ಶಮೀಮ್ ತಿಳಿಸಿದ್ದಾರೆ.

ಕಲ್ಕತ್ತಾ ಹೈಕೋರ್ಟ್‌ನ ವಿಶೇಷ ಪೀಠವು ಜಂಗಿಪುರದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಆದೇಶ ಕೊಟ್ಟಿದೆ. ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಶುಕ್ರವಾರ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ರ್ಯಾಲಿ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 18 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯವು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಈ ವಿಷಯದ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನನ್ನು ಬೆಂಬಲಿಸುವುದಿಲ್ಲ. ಈ ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ. ಹಾಗಾದರೆ ಗಲಭೆ ಮಾಡುತ್ತಿರುವುದು ಯಾಕೆ?" ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ, ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ಜನರು ಆಕ್ರೋಶಗೊಂಡಿರುವ ಬೆನ್ನಲ್ಲೇ ಪೋಸ್ಟ್ ಮಾಡಿದ್ದಾರೆ.
ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ, ಈ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದಿರುವ ಅವರು, ಧರ್ಮದ ರಾಜಕೀಯ ದುರುಪಯೋಗದ ವಿರುದ್ಧ ಎಚ್ಚರಿಕೆ ನೀಡಿದರು ಮತ್ತು ಗಲಭೆಗಳನ್ನು ಪ್ರಚೋದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕಾನೂನನ್ನು ನಾವು ಮಾಡಿಲ್ಲ, ಅದು ಕೇಂದ್ರ ಸರ್ಕಾರ ಮಾಡಿರುವುದು. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು, ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದರು. ಕೆಲವು ಶಕ್ತಿಗಳು ಪಶ್ಚಿಮ ಬಂಗಾಳದಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.












Click it and Unblock the Notifications