ಗುಜರಾತ್ ಕದನ: ಕುತೂಹಲಕ್ಕೆ ಕಾರಣವಾದ ಎಎಪಿ ಉತ್ಸಾಹ, ಬಿಜೆಪಿ ಸಂಕಷ್ಟ, ಕಾಂಗ್ರೆಸ್ ಮೌನ
ಅಹಮದಾಬಾದ್, ನವೆಂಬರ್ 3: ಈ ಸಾರಿಯ ಗುಜರಾತ್ ಚುನಾವಣೆಯು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಏರ್ಪಟ್ಟಿರುವ ರಾಜಕೀಯ ಕದನದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ವರೆಗೂ ಎರಡು ಪಕ್ಷಗಳ ನಡುವೆ ನಡೆಯುತ್ತಿದ್ದ ಹಣಾಹಣಿಯು, ಈ ಸಾರಿ ಮೂರು ಪಕ್ಷಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ.
ಮೋದಿ ಜನಪ್ರಿಯತೆ ಹಾಗೂ ಹಿಂದುತ್ವದ ಆಸರೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಯತ್ನ ಮಾಡುತ್ತಿದೆ. ಆದರೆ, ಕೇಜ್ರಿವಾಲ್ ನೇತೃತ್ವ ಆಮ್ ಆದ್ಮಿ ಪಕ್ಷವು ಜನರ ಮೂಲಭೂತ ಸಮಸ್ಯೆಗಳ ಮೇಲೆ ಪ್ರಚಾರ ನಡೆಸುತ್ತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಾತ್ರ ಮೌನಕ್ಕೆ ಜಾರಿದೆ. ಈ ಮೂರು ಪಕ್ಷಗಳ ನಡೆಗಳು ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ನಾವೇ ಗೆಲ್ಲುತ್ತೇವೆ ಎಂದ ಅರವಿಂದ್ ಕೇಜ್ರಿವಾಲ್
ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ಸ್ಪಷ್ಟ ಬಹುಮತವನ್ನು ಪಡೆದು ಅಧಿಕಾರ ಗದ್ದುಗೆ ಏರಿದೆ. ಗುಜರಾತ್‌ನಲ್ಲಿಯೂ ತನ್ನ ನೆಲೆಯನ್ನು ಕಂಡುಕೊಳ್ಳಲು ಎಎಪಿ ಯತ್ನಿಸುತ್ತಿದೆ. ಆದರೆ, ಎಎಪಿ ನಾಯಕರು ಮಾತ್ರ ಗುಜರಾತ್‌ನಲ್ಲಿ ತಮ್ಮದೇ ಪಕ್ಷವು ಅಧಿಕಾರಕ್ಕೆ ಏರಲಿದೆ ಎಂದು ಹೇಳುತ್ತಿದ್ದಾರೆ. ಎಎಪಿ ನಾಯಕರು ವ್ಯಕ್ತಪಡಿಸುತ್ತಿರುವ ಈ ಉತ್ಸಾಹವು ರಾಷ್ಟ್ರ ರಾಜಕಾರಣದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ಗುಜರಾತ್ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ವಿಡಿಯೊ ಹಂಚಿಕೊಂಡಿರುವ ಕೇಜ್ರಿವಾಲ್, 'ಈ ಸಾರಿ ಗೆಲುವು ನಮ್ಮದೇ' ಎಂದು ತಿಳಿಸಿದ್ದಾರೆ. ವಿದ್ಯುತ್, ಶಾಲೆ, ಶಿಕ್ಷಣ, ಮೂಲಭೂತ ಸಮಸ್ಯೆಗಳ ಕುರಿತು ಎಎಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಉಚಿತ ಕೊಡುಗೆಗಳ ಬಗ್ಗೆ ಭರವಸೆ ನೀಡಿದ್ದಾರೆ. 300 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುಲಾಗುವುದು ಎಂದು ಎಎಪಿ ಘೋಷಿಸಿದೆ. ಶಾಲೆಗಳ ಅಭಿವೃದ್ಧಿ, ಶಿಕ್ಷಕರ ನೇಮಕ ಸೇರಿದಂತೆ ಹಲವು ವಿಚಾರಗಳನ್ನು ಎಎಪಿ ಮುನ್ನೆಲೆಗೆ ತಂದಿದೆ.

ಎಎಪಿಯಿಂದ ಸಂಕಷ್ಟ ಎದುರಿಸುತ್ತಿರುವ ಬಿಜೆಪಿ
ಕಳೆದ 24 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ನಡೆಸಿದೆ. ಆದರೆ, ಈ ಬಾರಿಯ ಚುನಾವಣೆಯು ಬಿಜೆಪಿಗೆ ಸುಗಮದ ಹಾದಿಯಲ್ಲ. ಕಾರಣ, ಎಎಪಿ ಗುಜರಾತ್‌ನಲ್ಲಿ ಗೆಲ್ಲುವ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಿದೆ. ಆಡಳಿತ ವಿರೋಧಿ ಅಲೆಯೂ ಬಿಜೆಪಿಯನ್ನು ಕಾಡುತ್ತಿದೆ. ಬಿಜೆಪಿ ನಡೆಸಿರುವ ಗುಜರಾತ್ ಗೌರವ ಯಾತ್ರೆಗೂ ಅಂದಕೊಂಡಷ್ಟು ಜನ ಸೇರಿಲ್ಲ. ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಮೊರ್ಬಿ ಸೇತುವೆ ದುರಂತ, ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಗುಜರಾತ್ ಜನರನ್ನು ಸಂಕಷ್ಟಕ್ಕೆ ದೂಡಿವೆ. ಬೆಲೆ ಏರಿಕೆ, ಭೂಸ್ವಾದೀನದ ವಿರುದ್ಧ ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಹೇಗೆ ನಿಬಾಯಿಸಲಿದೆ ಎಂದು ಕಾದುನೋಡಬೇಕಿದೆ.

ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್
ಈ ಚುನಾವಣೆಯಲ್ಲಿ ಕಾಂಗ್ರೆಸ್ ನಡೆ ನಿಗೂಢವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ ಜೋಡೊ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್‌ಗೆ ಹೊಸ ಸಾರಥಿಯಾಗಿ ಮಲ್ಲಕಾರ್ಜುನ ಖರ್ಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರಾರೂ ಗುಜರಾತ್ ಕಡೆಗೆ ತಿರುಗಿಯೂ ನೋಡಿಲ್ಲ.
ಗುಜರಾತ್‌ನ ಹಳ್ಳಿಗಳಲ್ಲಿ ಬಲಿಷ್ಠವಾಗಿರುವ ಕಾಂಗ್ರೆಸ್ ಮೌನ ಪ್ರಚಾರವನ್ನು ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಚುನಾವಣಾ ಭಾಷಣದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಮೌನ ಪ್ರಚಾರ ಕೈಗೊಂಡಿದೆ. ಇದು ಕೆಳ ಹಂತದ ಪ್ರಚಾರವಾಗಿದೆ. ಈ ಬಗ್ಗೆ ಗುಜರಾತ್‌ನ ಜನರು ಎಚ್ಚರದಿಂದ ಇರುವಂತೆ ಹೇಳಿದ್ದರು. ಇದಕ್ಕೆ ಇಂಬು ನೀಡುವಂತೆ ಗುಜರಾತ್ ಕಾಂಗ್ರೆಸ್ ನಾಯಕರು ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಬಿಜೆಪಿಗೆ ಬಂಡಾಯದ ಬಿಸಿ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶೇ 30ರಷ್ಟು ಹೊಸಬರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ ಎಂಬ ಮಾತುಗಳೂ ಕೇಳಿಬಂದಿವೆ.
ದಕ್ಷಿಣ ಹಾಗೂ ಮಧ್ಯ ಗುಜರಾತ್‌ನ ನಾಯಕರನ್ನು ಕರೆಸಿಕೊಂಡು ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಟಿಕೆಟ್ ನೀಡುವ ಕುರಿತು ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.
182 ವಿಧಾನಸಭಾ ಕ್ಷೇತ್ರಗಳ ಪೈಕಿ 60 ರಿಂದ 70 ಸ್ಥಾನಗಳಿಗೆ ಹೊಸಬರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಅಮಿತ್ ಶಾ ಒಲವು ತೋರಿದ್ದಾರೆ. ಈಗಾಗಲೇ ಮೂರ್ನಾಲ್ಕು ಬಾರಿ ಗೆದ್ದಿರುವ ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ಹೆಚ್ಚಿವೆ. ಆ ಹಿನ್ನೆಲೆಯಲ್ಲಿ ಬಿಜೆಪಿಗೆ ಬಂಡಾಯ ಬಿಸಿ ತಟ್ಟಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications