ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ.16ರಿಂದ ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯ
ನವದೆಹಲಿ, ಡಿಸೆಂಬರ್ 13: ಭಾರತದ 2 ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗಿಗೆ ವಹಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಇದೇ ಡಿ.16ರಿಂದ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿವೆ.
ಪಿಟಿಐ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸಂಜಯ್ ದಾಸ್ ಮಾತನಾಡಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದರಿಂದ ಆರ್ಥಿಕತೆಯ ಆದ್ಯತೆ ವಲಯಗಳಿಗೆ ಹಾನಿಯಾಗುತ್ತದೆ ಮತ್ತು ಸ್ವ-ಸಹಾಯ ಗುಂಪುಗಳಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಸಾಲದ ಹರಿವು ಉಂಟಾಗುತ್ತದೆ ಎಂದು ಹೇಳಿದ್ದಾರೆ.

2 ದಿನಗಳ ಬ್ಯಾಂಕ್ ಮುಷ್ಕರ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಘಟಕದ ಒಕ್ಕೂಟ ಸದಸ್ಯರಗಳಾದ AIBEA, AIBOC, NCBE, AIBOA, BEFI, INBEF ಮತ್ತು INBOC ಗಳು ತಮ್ಮ ಬೇಡಿಕೆಗಳಿಗೆ ಬೆಂಬಲವಾಗಿ 2021ರ ಡಿಸೆಂಬರ್ 16 ಮತ್ತು 17ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ನಡೆಸಲು ಪ್ರಸ್ತಾಪಿಸಿವೆ.
ಎಸ್‌ಬಿಐ ಸೇವೆಗಳ ಮೇಲೆ ಪರಿಣಾಮ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಕರೆ ನೀಡಿರುವ ಡಿಸೆಂಬರ್ 16-17ರ ಎರಡು ದಿನಗಳ ಮುಷ್ಕರದಿಂದ ಬ್ಯಾಂಕ್‌ನ ಸಾಮಾನ್ಯ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೇಳಿದೆ.
ಮುಷ್ಕರದ ಸಮಯದಲ್ಲಿ ತನ್ನ ಶಾಖೆಗಳಲ್ಲಿ ಸಾಮಾನ್ಯ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಎಸ್‌ಬಿಐ ತಿಳಿಸಿದೆ.

"ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರದ ಸೂಚನೆಯನ್ನು ನಮಗೆ ನೀಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್ (IBA) ಹೇಳಿದೆ.
ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಏಕೆ ಕರೆ ನೀಡಿವೆ?
ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಇನ್ನು ಈಗಾಗಲೇ ಐಡಿಬಿಐ ಬ್ಯಾಂಕ್‌ನ ಅತಿಹೆಚ್ಚಿನ ಪಾಲಿನ ಷೇರನ್ನು 2019ರಲ್ಲಿ ಎಲ್‌ಐಸಿಗೆ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿತ್ತು. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯ ಬ್ಯಾಂಕ್‌ಗಳನ್ನು ಒಟ್ಟು 5ಕ್ಕೆ ಇಳಿಕೆ ಮಾಡಿದೆ.

ಖಾಸಗೀಕರಣದ ಪರಿಣಾಮವೇನು?
ಪಿಎಸ್‌ಬಿಗಳು ಭಾರತದಲ್ಲಿನ ಒಟ್ಟು ಠೇವಣಿಗಳಲ್ಲಿ ಶೇ.70ರಷ್ಟನ್ನು ಹೊಂದಿವೆ ಮತ್ತು ಅವುಗಳನ್ನು ಖಾಸಗಿ ಬಂಡವಾಳಕ್ಕೆ ಹಸ್ತಾಂತರಿಸುವುದರಿಂದ ಸಾಮಾನ್ಯ ಜನರು ಬ್ಯಾಂಕ್‌ಗಳಿಗೆ ಠೇವಣಿ ಮಾಡಿದ ಹಣ ಅಪಾಯಕ್ಕೆ ಸಿಲುಕುದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸಂಜಯ್ ದಾಸ್ ತಿಳಿಸಿದ್ದಾರೆ.
ಸರ್ಕಾರದ ವಹಿವಾಟುಗಳಲ್ಲಿ ವ್ಯತ್ಯಯ
ಬ್ಯಾಂಕ್‌ಗಳ ಖಾಸಗೀಕರಣ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತ ಸಾಲ, ಗೃಹ ಸಾಲ, ಶಿಕ್ಷಣ ಸಾಲ, ಉಳಿತಾಯ ಹಣದ ಭದ್ರತೆ ಇರಲ್ಲ ಎಂದು UFBU ವಕ್ತಾರ ಶ್ರೀನಿವಾಸ್ ತಿಳಿಸಿದ್ದಾರೆ. ಬ್ಯಾಂಕ್‌ಗಳ ಶಾಖೆಗಳಲ್ಲಿ ಮುಷ್ಕರದಿಂದ ಚೆಕ್ ಕ್ಲಿಯರೆನ್ಸ್, ಸರ್ಕಾರದ ವಹಿವಾಟುಗಳಿಗೆ ವ್ಯತ್ಯಯವಾಗಲಿದೆ. ಹಣ ಪಾವತಿ, ಹಣ ವರ್ಗಾವಣೆ ಹೀಗೆ ಅನೇಕ ಸಮಸ್ಯೆಗಳು ಷೇರು ಮಾರುಕಟ್ಟೆ ಮೇಲೆ ಸಹ ಮುಷ್ಕರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications