Priyanka Gandhi: ಬಂಡೀಪುರ: ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಗುಡುಗಿದ ಸಂಸದ ಯದುವೀರ್ ಒಡೆಯರ್
ಕೇರಳ ಹಾಗೂ ಕರ್ನಾಟಕದ ನಡುವೆ ವಿವಾದಕ್ಕೆ ಕಾರಣವಾಗಿರು ಬಂಡೀಪುರ ರಾತ್ರಿ ಸಂಚಾರ ವಿಚಾರವು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾತನಾಡಿರುವುದಕ್ಕೆ ಸಂಸದ ಯದುವೀರ್ ಒಡೆಯರ್ ಅವರು ಗುಡುಗಿದ್ದಾರೆ. ವಯನಾಡ್‌ನ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ, ಗೆದ್ದ ಬೆನ್ನಲ್ಲೇ ಕೇರಳಿಗರನ್ನು ಮೆಚ್ಚಿಸಲು ಅವರ ಆಡಿರುವ ಮಾತು ಇದೀಗ ಕನ್ನಡಿಗರನ್ನು ಕೆರಳಿಸಿದೆ. ಕನ್ನಡಿಗರಿಗೆ ಶಾಕ್ ಕೊಡಲು ಮುಂದಾದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಕರ್ನಾಟಕದ ಹಾಗೂ ಬಿಜೆಪಿ ನಾಯಕರು ತಿರಗೇಟು ಕೊಡುತ್ತಿದ್ದಾರೆ.
ಪ್ರಿಯಾಂಕಾ ಗಾಂಧಿವ ವಾದ್ರಾ ಅವರು, ವಯನಾಡ್ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆದರೆ ಗೆಲ್ಲುತ್ತಿದ್ದಂತೆ ಅವರು ಕೇರಳಿಗರನ್ನು ಖುಷಿಪಡಿಸಲು ಮುಂದಾಗಿದ್ದು, ಇದರಿಂದ ಕನ್ನಡಿಗರಿಗೆ ಸಂಕಷ್ಟ ಎದುರಾಗಿದೆ. ಕನ್ನಡಿಗರು ಪ್ರಿಯಾಂಕಾ ಗಾಂಧಿ ಅವರ ಭರವಸೆಗೆ ಕಿಡಿ ಕಾರಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾತಿಗೆ ಗುಡುಗಿರುವ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು, ಬಂಡೀಪುರದಲ್ಲಿ ರಾತ್ರಿ ಪ್ರಯಾಣ ನಿರ್ಬಂಧ ಮಾಡುವ ವಿಚಾರವಾಗಿ ಕಾಂಗ್ರೆಸ್ ನಾಯಕರು ತೋರಿಸುತ್ತಿರುವ ಈ ದ್ವಿಮುಖ ನಿಲುವು ಪರಿಸರ ಸಂರಕ್ಷಣೆಗೆ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಂಡೀಪುರದ ಮೂಲಕ ರಾತ್ರಿ ಪ್ರಯಾಣ ನಿರ್ಬಂಧವನ್ನು ನಿಷೇಧಿಸುವ ವಿಚಾರದ ಬಗ್ಗೆ ನೀಡಿರುವ ಇತ್ತೀಚಿನ ಹೇಳಿಕೆ ಕಾಂಗ್ರೆಸ್ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಒಂದು ಕಡೆ, ಮುಖ್ಯಮಂತ್ರಿ ನಿರ್ದಿಷ್ಟವಾಗಿ ಅಂಥ ಯಾವುದೇ ಪ್ರಸ್ತಾಪವಿಲ್ಲ ಎಂದು ನಿರಾಕರಿಸುತ್ತಿದ್ದಾರೆ.
ಮತ್ತೊಂದು ಕಡೆ, ಕಾಂಗ್ರೆಸ್ ಪಕ್ಷದ ರಾಷ್ಟೀಯ ನಾಯಕರು ಅದಕ್ಕೆ ವಿರುದ್ಧವಾಗಿ ಸೂಚನೆ ನೀಡುತ್ತಿದ್ದಾರೆ. ಈ ಅಸಮನ್ವಯತೆ ಅವರ ಆಡಳಿತದ ಪ್ರಾಮಾಣಿಕತೆಯ ಬಗ್ಗೆ ಸಂದೇಹಗಳನ್ನು ಹುಟ್ಟುಹಾಕುತ್ತಿದೆ. ಮೇಲಾಗಿ, ಈ ಪ್ರಸ್ತಾಪಗಳು ನಮ್ಮ ದೇಶದ ಪರಿಸರ ವ್ಯವಸ್ಥೆಗಳ ಸಂರಕ್ಷಣೆಯ ಬಗ್ಗೆ ಆತಂಕವನ್ನು ಉಂಟುಮಾಡುವಂತೆ ಇದೆ.

ಬಂಡೀಪುರವು ಕೇವಲ ಒಂದು ರಸ್ತೆ ಅಲ್ಲ. ಇದು ಅನೇಕ ವನ್ಯಜೀವಿ ಪ್ರಭೇದಗಳ ವಾಸಸ್ಥಳವಾಗಿದೆ. ಅವುಗಳನ್ನು ಮಾನವ ಚಟುವಟಿಕೆಗಳಿಂದ ರಕ್ಷಿಸಲು, ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಸೂಕ್ಷ್ಮ ಅವಧಿಯಲ್ಲಿ ಅವುಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ರಾಜಕೀಯ ನಾಯಕರು ಈ ದೇಶದ ಪ್ರಕೃತಿ ಸಂರಕ್ಷಣೆಗೆ ಪ್ರಜ್ಞಾಪೂರ್ವಕವಾಗಿರುವುದನ್ನು ನಿರ್ಧರಿಸಬೇಕೇ ಹೊರತು ತಮ್ಮ ಪ್ರಣಾಳಿಕೆಯು ಕೆಲವೊಬ್ಬರಿಗೆ ಲಾಭವನ್ನು ತರುವಂತೆ ಮಾಡಬಾರದು. ಈ ರೀತಿ ನಿರ್ಭಂಧವನ್ನು ಹಿಂಪಡೆಯುವುದರಿಂದ ಪರಿಸರ ಹಾಗೂ ವನ್ಯಜೀವಿಗಳ ಸರ್ವನಾಶ ಮಾಡುವುದು ಸರಿಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಹಾನಿಯ ಬಗ್ಗೆಯು ಸಹ ಚಿಂತಿಸಬೇಕಾಗಿದೆ ಎಂದಿದ್ದಾರೆ.
ಹಿನ್ನೆಲೆ ಏನು: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ನ ನೂತನ ಸಂಸದೆ. ವಯನಾಡ್‌ನಲ್ಲಿ ಮಾತನಾಡುವಾಗ ಬಂಡೀಪುರ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದೇ ನನ್ನ ಪ್ರಥಮ ಆದ್ಯತೆ. ಇಲ್ಲಿ ರಸ್ತೆ ಸಂಚಾರ ಇಲ್ಲದೆ ಇರುವುದರಿಂದ ಯಾವ ರೀತಿ ಸಮಸ್ಯೆ ಆಗುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಹೀಗಾಗಿ, ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಪ್ರಥಮ ಗುರಿ ಎಂದಿದ್ದರು. ಪ್ರಿಯಾಂಕಾ ಅವರ ಈ ಮಾತು ಕನ್ನಡಿಗರನ್ನು ಕೆರಳಿಸಿದೆ. ಈ ಭಾಗದಲ್ಲಿ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ರಾತ್ರಿ ವೇಳೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಈ ವಿಷಯ ಕರ್ನಾಟಕ ಹಾಗೂ ಕೇರಳದ ನಡುವೆ ಪದೇ ಪದೇ ಚರ್ಚೆಯಾಗುತ್ತಿದೆ. 2009ರಿಂದಲೂ ಕರ್ನಾಟಕ ಸರ್ಕಾರ ಈ ಭಾಗದಲ್ಲಿ ನಿಷೇಧ ಹೇರಿದೆ.












Click it and Unblock the Notifications