ಕಾಣಿಸಿಕೊಂಡ ಚಂದ್ರ, ಆಗಸ್ಟ್ 22ರಂದೇ ಬಕ್ರೀದ್ ಆಚರಣೆ
ಬೆಂಗಳೂರು, ಆಗಸ್ಟ್ 20: ದೇಶದ ಹಲವೆಡೆ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಕೇರಳ, ಕರ್ನಾಟಕ ಭಾಗದಲ್ಲಿ ಆಗಸ್ಟ್ 22ರಂದೇ ಬಕ್ರೀದ್ ಆಚರಣೆ ನಡೆಸಲಾಗುವುದು.
ಚಂದ್ರದರ್ಶನ ಸಮಿತಿ ಅಭಿಪ್ರಾಯದಂತೆ ರಾಜ್ಯ ಸರ್ಕಾರ ಬಕ್ರೀದ್ ರಜೆಯನ್ನು ಈ ಹಿಂದೆ ಪ್ರಕಟಿಸಿದಂತೆ ಆಗಸ್ಟ್ 22ರಂದೇ ರಜೆ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಹಲವು ಕ್ಯಾಲೆಂಡರ್‌ಗಳಲ್ಲಿ ಮತ್ತು ಕರ್ನಾಟಕ ಸರ್ಕಾರ ಹಿಂದೆ ಪ್ರಕಟಿಸಿದ ಸರ್ಕಾರಿ ರಜಾ ದಿನಗಳ ಪಟ್ಟಿಯಲ್ಲಿ ಆಗಸ್ಟ್ 22ರಂದು ಬಕ್ರೀದ್ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಈ ರಜೆ ಬಗ್ಗೆ ಗೊಂದಲವಿದ್ದ ಕಾರಣ ಚಂದ್ರದರ್ಶನ ಸಮಿತಿ ಸಭೆ ನಡೆಸಿ, ಬುಧವಾರ(ಆಗಸ್ಟ್ 22) ದಂದು ಬಕ್ರೀದ್ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಕೇರಳದಲ್ಲಿ ಸಾವು ನೋವಿನ ನಡುವೆ ತ್ಯಾಗ, ಬಲಿದಾನದ ಸಂಕೇತವಾದ ಈದ್ ಉಲ್ ಅದಾ ಆಚರಿಸಲು ನಿರ್ಧರಿಸಲಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಧು ಅಲ್ ಹಿಜ್ಜಾ ತಿಂಗಳಿನ 10ನೇ ದಿನದಂದು ಬಕ್ರೀದ್ ಆಚರಿಸಲಾಗುತ್ತದೆ. ಕರ್ನಾಟಕ, ಕೇರಳ, ಉತ್ತರಪ್ರದೇಶಗಳಲ್ಲಿ ಆಗಸ್ಟ್ 22ರಂದು ಉಳಿದೆಡೆಗಳಲ್ಲಿ ಚಂದ್ರದರ್ಶನ ನೋಡಿಕೊಂಡು ಆಗಸ್ಟ್ 23ರಂದು ಆಚರಣೆ ಮಾಡಲಾಗುತ್ತದೆ.
ಈ ಬಾರಿ ಹಬ್ಬದ ಆಚರಣೆಗೆ ತೆಗೆದಿಟ್ಟ ಹಣದಲ್ಲಿ ಶೇ 10ರಷ್ಟನ್ನು ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡುವಂತೆ ಮೌಲಾನಾ ಖಾಲೀದ್ ರಶೀದ್ ಫರಂಗಿ ಅವರು ಕರೆ ನೀಡಿದ್ದಾರೆ.
ಇತ್ತ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕುರಿ ಮತ್ತು ಮೇಕೆಯ ವ್ಯಾಪಾರ ಜೋರಾಗಿ ಸಾಗಿದೆ. ಬಕ್ರೀದ್ ಆಚರಣೆ ಮಾಡುವವರು ಮೈದಾನಕ್ಕೆ ಬಂದು ಕುರಿಗಳ ಖರೀದಿಯಲ್ಲಿ ತೊಡಗಿದ್ದಾರೆ.
ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ, ಚಿತ್ರದುರ್ಗ ಮತ್ತು ಪಕ್ಕದ ಆಂಧ್ರಪ್ರದೇಶದಿಂದ ಕುರಿ ವ್ಯಾಪಾರಿಗಳು ಮೈದಾನಕ್ಕೆ ಆಗಮಿಸಿದ್ದಾರೆ, ಲಕ್ಷಾಂತರ ರುಪಾಯಿ ವ್ಯವಹಾರ ನಡೆಯುವ ನಿರೀಕ್ಷೆಯಿದೆ.












Click it and Unblock the Notifications