Ram Mandir: ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ ಅಯೋಧ್ಯೆ ರಾಮ ಮಂದಿರ? ಫೋಟೊ ಹಂಚಿಕೊಂಡ ಇಸ್ರೋ
ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭಕ್ಕೂ ಮುನ್ನ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಭವ್ಯವಾದ ರಾಮಮಂದಿರವನ್ನು ಸೆರೆಹಿಡಿದಿದ್ದು ಫೋಟೊಗಳನ್ನು ಹಂಚಿಕೊಂಡಿದೆ.
2.7 ಎಕರೆ ವಿಸ್ತೀರ್ಣದ ರಾಮಮಂದಿರದ ಸ್ಥಳವನ್ನು ನೋಡಬಹುದು ಮತ್ತು ಭಾರತೀಯ ರಿಮೋಟ್ ಸೆನ್ಸಿಂಗ್ ಸರಣಿಯ ಉಪಗ್ರಹಗಳನ್ನು ಬಳಸಿಕೊಂಡು ಅದರ ವಿಸ್ತೃತ ನೋಟವನ್ನು ಸಹ ಒದಗಿಸಲಾಗಿದೆ.

ನಿರ್ಮಾಣ ಹಂತದಲ್ಲಿರುವ ದೇವಾಲಯವನ್ನು ಕಳೆದ ವರ್ಷ ಡಿಸೆಂಬರ್ 16 ರಂದು ಸೆರೆ ಹಿಡಿಯಲಾಗಿದೆ. ಅಂದಿನಿಂದ, ಅಯೋಧ್ಯೆಯ ಮೇಲೆ ದಟ್ಟವಾದ ಮಂಜು ಇರುವ ಕಾರಣ ಸ್ಪಷ್ಟವಾದ ಫೋಟೊ ಪಡೆಯುವುದು ಕಷ್ಟಕರವಾಗಿದೆ.
ಉಪಗ್ರಹ ಚಿತ್ರಗಳಲ್ಲಿ, ದಶರಥ್ ಮಹಲ್ ಮತ್ತು ಸರಯೂ ನದಿಯು ಸ್ಪಷ್ಟವಾಗಿ ಕಂಡುಬರುತ್ತದೆ. ಹೊಸದಾಗಿ ನವೀಕರಿಸಿದ ಚಿತ್ರದಲ್ಲಿ ಅಯೋಧ್ಯೆ ರೈಲು ನಿಲ್ದಾಣವೂ ಕೂಡ ಕಾಣಿಸುತ್ತದೆ. ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನಡೆಯಲಿದೆ
ಇಸ್ರೋ ತಂತ್ರಜ್ಞಾನ ಬಳಕೆ
ಭಾರತವು ಪ್ರಸ್ತುತ 50 ಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಹೊಂದಿದೆ ಮತ್ತು ಅವುಗಳಲ್ಲಿ ಕೆಲವು ಒಂದು ಮೀಟರ್‌ಗಿಂತ ಕಡಿಮೆ ರೆಸಲ್ಯೂಶನ್ ಹೊಂದಿವೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಭಾಗವಾದ ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ರಾಮ ಮಂದಿರ ಚಿತ್ರವನ್ನು ಸಂಸ್ಕರಿಸಿದೆ.
ದೇವಾಲಯದ ನಿರ್ಮಾಣದ ಇತರ ಹಂತಗಳಲ್ಲಿಯೂ ಇಸ್ರೋ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಭಗವಾನ್ ರಾಮನ ವಿಗ್ರಹವನ್ನು ಇರಿಸಲು ನಿಖರವಾದ ಸ್ಥಳವನ್ನು ಗುರುತಿಸುವುದು ಈ ಯೋಜನೆಯಲ್ಲಿ ದೊಡ್ಡ ಸವಾಲಾಗಿತ್ತು. ದೇವಾಲಯದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ ಟ್ರಸ್ಟ್ ಭಗವಾನ್ ರಾಮನು ಜನಿಸಿದನೆಂದು ನಂಬಲಾದ ಜಾಗದಲ್ಲಿ ವಿಗ್ರಹವನ್ನು ಇರಿಸಲು ಬಯಸಿತು.
ದೇವಾಲಯದ ನಿರ್ಮಾಣವು ಬಾಬರಿ ಮಸೀದಿ ಕೆಡವಿದ ಸುಮಾರು ಮೂರು ದಶಕಗಳ ನಂತರ ಪ್ರಾರಂಭವಾದ ಕಾರಣ ಸ್ಪಷ್ಟವಾಗಿ ಸ್ಥಳ ಗುರುತಿಸಲು ಕಷ್ಟವಾಗಿತ್ತು. ನಂತರ ಬಾಹ್ಯಾಕಾಶ ತಂತ್ರಜ್ಞಾನವು ರಕ್ಷಣೆಗೆ ಬಂದಿದೆ ಎನ್ನಲಾಗಿದೆ.
ನಿಖರವಾದ ಸ್ಥಳವನ್ನು ಗುರುತಿಸಲು, ನಿರ್ಮಾಣ ಸಂಸ್ಥೆ ಲಾರ್ಸೆನ್ ಮತ್ತು ಟೂಬ್ರೊಗೆ ಗುತ್ತಿಗೆದಾರರು ಅತ್ಯಾಧುನಿಕ ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಆಧಾರಿತ ಕೋ-ಆರ್ಡಿನೇಟ್‌ಗಳನ್ನು ಬಳಸಿದರು. ಸುಮಾರು 1-3 ಸೆಂಟಿಮೀಟರ್‌ಗಳಷ್ಟು ನಿಖರವಾದ ನಿರ್ದೇಶಾಂಕಗಳನ್ನು ರಚಿಸಲಾಗಿದೆ.
ಮೈಸೂರಿನ ಅರುಣ್ ಯೋಗಿರಾಜ್ ಕೈಚಳಕದಲ್ಲಿ ಮೂಡಿ ಬಂದಿರುವ ಬಾಲರಾಮನ ವಿಗ್ರಹವು ಅಯೋಧ್ಯೆ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಈಗಾಗಲೇ ಚಿನ್ನದ ಬಿಲ್ಲು ಬಾಣ ಹಿಡಿದಿರುವ ಬಾಲರಾಮನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಭಕ್ತರ ಸಂಭ್ರಮ ಮುಗಿಲುಮುಟ್ಟಿದೆ.












Click it and Unblock the Notifications